ಮಂಗಳೂರು ವಿವಿ ಕ್ಯಾಂಪಸ್‌ನೊಳಗೂ ವಿದ್ಯಾರ್ಥಿಗಳಿಗಿದೆ ಸುರಕ್ಷತೆಯ ಆತಂಕ!

ಮಂಗಳೂರು, ಸೆ.2: ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಕ್ಯಾಮರಾದಲ್ಲಿ ರೆಕಾರ್ಡಿಂಗ್ ಮಾಡಿರುವ ಪ್ರಕರಣವು ಸುರಕ್ಷತೆಯ ಆತಂಕ ಸೃಷ್ಟಿಸಿರುವ ಜತೆಗೇ, ವಿವಿಯ ಕ್ಯಾಂಪಸ್ ಕೂಡಾ ಸುರಕ್ಷಿತವಾಗಿಲ್ಲ ಎಂಬ ಮಾತುಗಳು ದಟ್ಟವಾಗುತ್ತಿವೆ.
ಮಂಗಳೂರು ಹೊರವಲಯದ ಕೊಣಾಜೆ ಮುಡಿಪು ಗ್ರಾಮ ಪಂಚಾಯತ್ ವ್ಯಾಪ್ತಿಯ ನೂರಾರು ಎಕರೆ ಪ್ರದೇಶದಲ್ಲಿ ಪ್ರತ್ಯೇಕ ವಿಭಾಗಗಳ ಕಟ್ಟಡಗಳೊಂದಿಗೆ ಕಾರ್ಯಾಚರಿಸುತ್ತಿರುವ ಮಂಗಳೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನೊಳಗೆ ಸಾರ್ವಜನಿಕರ ಓಡಾಟ ಹಾಗೂ ವಾಹನಗಳ ಸಂಚಾರಕ್ಕೂ ಅವಕಾಶವಿದೆ.
ಕ್ಯಾಂಪಸ್‌ನೊಳಗೆ ಗ್ರಂಥಾಲಯ, ಪ್ರತ್ಯೇಕ ವಿಭಾಗಗಳಿಗೆ ಸೇರಿದ ಪ್ರತ್ಯೇಕ ಪ್ರಯೋಗಾಲಯಗಳೂ ಇವೆ. ಒಂದು ವಿಭಾಗದಿಂದ ಮತ್ತೊಂದು ವಿಭಾಗಕ್ಕೆ ಬಹಳಷ್ಟು ಅಂತರವಿದೆ. ಆಡಳಿತ ಸೌಧ ರಸ್ತೆಯ ಒಂದು ಕಡೆಯಾದರೆ, ಉಳಿದಂತಹ ವಿದ್ಯಾರ್ಥಿನಿ ಹಾಗೂ ವಿದ್ಯಾರ್ಥಿ ನಿಲಯಗಳು, ಪ್ರಾಧ್ಯಾಪಕರ ಕ್ವಾಟ್ರಸ್‌ಗಳು, ವಿವಿಧ ವಿಭಾಗಗಳ ಪ್ರತ್ಯೇಕ ಕಟ್ಟಡಗಳು ರಸ್ತೆಯ ಮತ್ತೊಂದು ಬದಿಯಲ್ಲಿವೆ. ಪ್ರಯೋಗಾಲಯ, ಗ್ರಂಥಾಲಯ ಹಾಗೂ ಹಾಸ್ಟೆಲ್‌ಗಳಿಗೆ ಸಂಬಂಧಿಸಿ ವಿದ್ಯಾರ್ಥಿಗಳು ರಾತ್ರಿ ಹಗಲು ಈ ಕ್ಯಾಂಪಸ್‌ನೊಳಗೆ ಸಂಚರಿಸುತ್ತಿರುತ್ತಾರೆ. ಅದೇ ವೇಳೆ ಸಾರ್ವಜನಿಕವಾಗಿಯೂ ಕ್ಯಾಂಪಸ್ ಒಳಗಣ ರಸ್ತೆ ಮುಕ್ತವಾಗಿರುವುದರಿಂದ ಯಾವುದೇ ರೀತಿಯ ಅಪಾಯದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂಬ ಆತಂಕ ವಿವಿಯ ಸಿಂಡಿಕೇಟ್ ಸದಸ್ಯರಾದ ಹರೀಶ್ ಆಚಾರ್ಯ ಅವರದ್ದು.
‘‘ಪ್ರಯೋಗಾಲಯ, ಗ್ರಂಥಾಲಯಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳು ಕ್ಯಾಂಪಸ್‌ನೊಳಗೆ ರಾತ್ರಿ 10 ಗಂಟೆಯವರೆಗೂ ಕಾರ್ಯ ನಿರತರಾಗಿರುತ್ತಾರೆ. ಸಾರ್ವಜನಿಕವಾಗಿಯೂ ಈ ಕ್ಯಾಂಪಸ್ ಉಪಯೋಗಿಸಲ್ಪಡುತ್ತಿರುವುದರಿಂದ ಈ ವ್ಯವಸ್ಥೆಯನ್ನು ಯಾರೋ ದುಷ್ಕರ್ಮಿಗಳು ದುರುಪಯೋಗ ಪಡಿಸುವ ಸಾಧ್ಯತೆಯೂ ಇದೆ. ಹಾಗಾಗಿ ಕ್ಯಾಂಪಸ್‌ನೊಳಗೆ ಭದ್ರತೆಯನ್ನು ಒದಗಿಸುವುದು ಸಮಸ್ಯೆಯಾಗಿದೆ’’ ಎಂದವರು ಹೇಳುತ್ತಾರೆ.
‘‘ಮಂಗಳಾ ಅಡಿಟೋರಿಯಂನಿಂದ ಲೇಡೀಸ್ ಹಾಸ್ಟೆಲ್‌ವರೆಗಿನ ರಸ್ತೆ ಜನರಿಗೆ ಅಷ್ಟೇನು ಅಗತ್ಯವಿಲ್ಲ. ಮಾತ್ರವಲ್ಲದೆ, ಆಡಳಿತ ಸೌಧವನ್ನು ಹೊರತುಪಡಿಸಿ ಉಳಿದ ಮಂಗಳೂರು ವಿವಿ ಕ್ಯಾಂಪಸ್ ಸುತ್ತ ಬೇಲಿ ಹಾಕುವ ಕಾರ್ಯದ ಮೂಲಕ ಭದ್ರತೆಯನ್ನು ಕಲ್ಪಿಸಬಹುದಾಗಿದೆ. ತುಮಕೂರು ವಿಶ್ವವಿದ್ಯಾಲಯದ ಕ್ಯಾಂಪಸ್‌ನೊಳಗೂ ಸಾರ್ವಜನಿಕರಿಗೆ ಸಂಚಾರಕ್ಕೆ ಅವಕಾಶವಿದೆ. ಆದರೆ, ಆ ಅವಕಾಶವನ್ನು ಬೆಳಗ್ಗೆ 6ರಿಂದ 8 ಗಂಟೆ ಹಾಗೂ ಸಂಜೆ 6ರಿಂದ 8 ಗಂಟೆಯವರೆಗೆ ಮಾತ್ರ ಕಲ್ಪಿಸಲಾಗಿದೆ. ಇದರಿಂದ ಕ್ಯಾಂಪಸ್‌ನೊಳಗೆ ಓಡಾಡುವ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಾತ್ರಿಪಡಿಸಲಾಗಿದೆ. ಇಂತಹ ವ್ಯವಸ್ಥೆ ಮಂಗಳೂರು ವಿಶ್ವವಿದ್ಯಾಲಯದಲ್ಲೂ ಅಗತ್ಯವಿದೆ’’ ಎಂದು ಹರೀಶ್ ಆಚಾರ್ಯ ಅಭಿಪ್ರಾಯಿಸುತ್ತಾರೆ.
1.5 ಕೋಟಿ ರೂ. ವೆಚ್ಚದಲ್ಲಿ ವಿವಿ ಕ್ಯಾಂಪಸ್‌ಗೆ ಸಿಸಿ ಕ್ಯಾಮರಾ: ಪ್ರೊ. ಬೈರಪ್ಪ
ಮಂಗಳೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಪ್ರಕ್ರಿಯೆ ಸೋಮವಾರದಿಂದಲೇ ಆರಂಭಗೊಳ್ಳಲಿದೆ ಎಂದು ಕುಲಪತಿ ಪ್ರೊ. ಬೈರಪ್ಪ ತಿಳಿಸಿದ್ದಾರೆ.
ನಮ್ಮದೇ ಆದ ಆಂತರಿಕ ವ್ಯವಸ್ಥೆ ಇದೆ. ನಮ್ಮದೇ ಆದ ಅನುಭವಿಗಳಿದ್ದಾರೆ. ನಾವು ಎಲ್ಲಾ ರೀತಿಯ ವಿಚಾರಗಳನ್ನು ಈ ವಿಷಯದಲ್ಲಿ ವ್ಯವಸ್ಥಿತವಾಗಿ ಮಾಡಿದ್ದೇವೆ. ಈಗ ಪೊಲೀಸರಿಗೆ ದೂರು ನೀಡಲಾಗಿದೆ. ಒಂದೆರಡು ದಿನಗಳಲ್ಲೇ ತಪ್ಪಿತಸ್ಥ ಯಾರೆಂಬುದು ಬಹಿರಂಗಗೊಳ್ಳಲಿದೆ ಎಂದು ಕುಲಪತಿ ತಿಳಿಸಿದ್ದಾರೆ.







