ಕೋರ್ಟ್ ಸೂಚಿಸಿದರೆ ನೀರು ಬಿಡಲೇಬೇಕು: ಕಂದಾಯ ಸಚಿವ ಕಾಗೋಡು ತಿಮ್ಮಪ್ಪ

ಬೆಂಗಳೂರು, ಸೆ. 2: ಕಾವೇರಿ ನ್ಯಾಯಾಧೀಕರಣ ಹಾಗೂ ಸುಪ್ರೀಂ ಕೋರ್ಟ್ ಸೂಚಿಸಿದರೆ ರಾಜ್ಯ ಸರಕಾರ ಕಾವೇರಿ ನೀರನ್ನು ಬಿಡುವುದು ಅನಿವಾರ್ಯ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕು ಎನ್ನುವ ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಸಂಕಷ್ಟಕ್ಕೆ ಸಿಲುಕಿದೆ. ಕರ್ನಾಟಕ ಮೇಲಿದ್ದು, ತಮಿಳುನಾಡು ಕೆಳಗಿದೆ ಎಂದು ಹೇಳಿದರು.
ಕಾವೇರಿ ನೀರು ಬಿಡೋ ಸಂದರ್ಭ ಬಂದರೆ ಬಿಡಲೇಬೇಕು. ಕಾವೇರಿ ನ್ಯಾಯಾಧೀಕರಣ, ಸುಪ್ರೀಂ ಕೋರ್ಟ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ನೀರು ಬಿಡುವುದು ಅನಿವಾರ್ಯ. ಮಹಾದಾಯಿ ವಿಚಾರದಲ್ಲಿ ಬಂದ ತೀರ್ಪು ಇಲ್ಲಿ ಬಂದಿದ್ದರೆ ಉತ್ತಮ ಆಗುತ್ತಿತ್ತು ಎಂದು ವಿಶ್ಲೇಷಿಸಿದರು.
ಯಾರ ಪಾಪದ ಕೂಸು: ‘ನೈಸ್’ ಎನ್ನುವ ಪಾಪದ ಕೂಸು ಕರ್ನಾಟಕ ರಾಜ್ಯಕ್ಕೆ ತಂದು ಹಾಕಿದ್ದೆ ದೇವೇಗೌಡ. ಜೆ.ಎಚ್.ಪಟೇಲ್ ಸಿಎಂ ಆಗಿದ್ದ ಸಂದರ್ಭದಲ್ಲಿ ಏಕೆ ಈ ವಿಷಯ ಪ್ರಸ್ತಾಪಿಸಲಿಲ್ಲ. ಬಿ.ಎಸ್.ಪಾಟೀಲ್ ಕಾರ್ಯದರ್ಶಿ ಆಗಿದ್ದ ವೇಳೆ ಪಟೇಲ್‌ರನ್ನು ದಿಕ್ಕು ತಪ್ಪಿಸಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದರು ಎಂದು ದೂರಿದರು.
ಬಿ.ಎಸ್.ಪಾಟೀಲ್, ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಸಂಬಂಧಿಕರು. ಹೀಗಾಗಿ ಅಧಿಕಾರ ದುರ್ಬಳಕೆ ಮಾಡಿಕೊಂಡರು. ವ್ಯಾಪಾರ ಹೇಗೆ ಮಾಡಬೇಕೆಂಬುದನ್ನು ಅಶೋಕ್ ಖೇಣಿಯಿಂದ ಕಲಿಯಬೇಕು ಎಂದು ಕಾಗೋಡು ತಿಮ್ಮಪ್ಪ ಇದೇ ವೇಳೆ ಖೇಣಿಯ ವ್ಯವಹಾರವನ್ನು ಬಯಲಿಗಿಟ್ಟರು.
‘ನೈಸ್’ ವಿರುದ್ಧ ಹೋರಾಟ ಮಾಡುವುದಿಲ್ಲ ಎಂದು ಘೋಷಿಸಿ ಇಷ್ಟು ದಿನ ವೌನ ವಹಿಸಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇದೀಗ ಮತ್ತೆ ಅದರ ವಿರುದ್ಧ ಹೋರಾಟ ಮಾಡುವ ಮಾತುಗಳನ್ನು ಆಡುತ್ತಿದ್ದಾರೆ ಎಂದು ಕಾಗೋಡು ತಿಮ್ಮಪ್ಪ ಇದೇ ಸಂದರ್ಭದಲ್ಲಿ ಟೀಕಿಸಿದರು.





