ಉಡುಪಿ ಸರಕಾರಿ ಆಸ್ಪತ್ರೆ ಖಾಸಗೀಕರಣದ ಬಗ್ಗೆ ಉಸ್ತುವಾರಿ ಸಚಿವರಿಗೆ ಮಾಹಿತಿ ಇಲ್ಲ ?

ಉಡುಪಿ, ಸೆ.2: ಉಡುಪಿಯ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಖಾಸಗೀಕರಣದ ಕುರಿತು ತನಗೇನೂ ಮಾಹಿತಿ ಇಲ್ಲ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಕಂಡ್ಲೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಸರಕಾರದ ನಿರ್ಧಾರದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ತನಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ ಎಂದರು. ಮೊನ್ನಿನ ಸಚಿವ ಸಂಪುಟದ ಸಭೆಯಲ್ಲಿ ಉಡುಪಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಅನಿವಾಸಿ ಉದ್ಯಮಿ ಬಿ.ಆರ್.ಶೆಟ್ಟಿ ಅವರಿಗೆ 30ವರ್ಷ ಲೀಸ್‌ಗೆ ನೀಡುವ ನಿರ್ಧಾರವಾಗಿದೆಯಲ್ಲ ಎಂದು ಮತ್ತೆ ಪ್ರಶ್ನಿಸಿದಾಗ, ಆ ಸಭೆಯಲ್ಲಿ ನಾನು ಉಪಸ್ಥಿತನಿರಲಿಲ್ಲ ಎಂದರು.
ಹಾಗಾದರೆ ಸರಕಾರದ ಈ ನಿರ್ಧಾರದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಮತ್ತೆ ಕೇಳಿದಾಗ, ಅದು ಆಸ್ಪತ್ರೆಯ ಖಾಸಗೀಕರಣವಲ್ಲ, ಕೇವಲ ಜಾಗವನ್ನು ಮಾತ್ರ ಅವರಿಗೆ ನೀಡಲಾಗುತ್ತಿದೆ ಎಂದರು.
ಆದರೆ ಈಗ ಲಭ್ಯವಿರುವ ಮಾಹಿತಿಯಂತೆ ಉಡುಪಿಯ ಕೊಡುಗೈ ದಾನಿ ಹಾಜಿ ಅಬ್ದುಲ್ ಅವರು ಸರಕಾರಿ ಆಸ್ಪತ್ರೆಗೆ (ಅಜ್ಜರಕಾಡಿನ ಜಿಲ್ಲಾಸ್ಪತ್ರೆ ಹಾಗೂ ಕೆಎಂ ಮಾರ್ಗದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ) ಜಾಗವನ್ನು ದಾನವಾಗಿ ನೀಡುವಾಗ ಇದನ್ನು ಕೇವಲ ಸರಕಾರಿ ಆಸ್ಪತ್ರೆಗೆ ಮಾತ್ರ ಬಳಸಬೇಕೆಂದು ದಾನಪತ್ರದಲ್ಲಿ ನಮೂದಿಸಿರುವ ಬಗ್ಗೆ ಪ್ರಶ್ನಿಸಿದಾಗ ‘ಅದು ಸರಕಾರಿ ಆಸ್ಪತ್ರೆಯೇ’ ಎಂದು ಹಾರಿಕೆ ಉತ್ತರ ನೀಡಿದರು.
ಇನ್ನಷ್ಟು ಪ್ರಶ್ನೆಯನ್ನು ಅರ್ಧದಲ್ಲೇ ತಡೆದ ಸಚಿವರು ‘ಆ ಬಗ್ಗೆ ಮುಂದೆ ಮಾತನಾಡೋಣ’ ಎನ್ನುತ್ತಾ ನಿರ್ಗಮಿಸಿದರು.







