ಹೊನ್ನಾವರ: ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ

ಹೊನ್ನಾವರ, ಸೆ.2: ಕಾರ್ಮಿಕ ಸಂಘಟನೆಗಳು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರೆ ನೀಡಿದ ದೇಶವ್ಯಾಪಿ ಮುಷ್ಕರದ ಹಿನ್ನೆಲೆಯಲ್ಲಿ ಶುಕ್ರವಾರ ಪಟ್ಟಣದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ತಿಲಕ್‌ಗೌಡ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟಿಸಿದರು. ಬಂದ್ ಕರೆಗೆ ನೀರಸ ಪ್ರತಿಕ್ರಿಯೆ ಕಂಡು ಬಂದಿದ್ದು, ಬಸ್ ಸಂಚಾರ ಎಂದಿನಂತೆ ಇತ್ತು. ಅಂಗಡಿ ಮುಂಗಟ್ಟು, ಹೊಟೇಲ್‌ಗಳು ಎಂದಿನಂತೆ ತೆರೆದಿದ್ದವು. ಟೆಂಪೋಗಳ ಸಂಚಾರ ಸ್ಥಗಿತಗೊಂಡಿತ್ತು. ಸರಕಾರಿ ಕಚೇರಿ ಹಾಗೂ ಶಾಲಾ-ಕಾಲೇಜುಗಳು ಎಂದಿನಂತಿದ್ದವು. ಆಟೊರಿಕ್ಷಾಗಳ ಓಡಾಟ ಇಲ್ಲದೆ ಮಧ್ಯಾಹ್ನದವರೆಗೆ ಸಾರ್ವಜನಿಕರು ಪರದಾಡುವಂತಾಯಿತು.
ಬಂದ್ ಕರೆ ಘೋಷಣೆಯಾದ್ದರಿಂದ ಗ್ರಾಮೀಣ ಪ್ರದೇಶದ ಜನರು ಪಟ್ಟಣಕ್ಕೆ ಆಗಮಿಸಿದ್ದುದು ವಿರಳವಾಗಿತ್ತು. ಪ್ರತಿಭಟನೆಯಲ್ಲಿ ಸಿಐಟಿಯು, ಅಂಗನವಾಡಿ ನೌಕರರ ಸಂಘ, ಕರ್ನಾಟಕ ಪ್ರಾಂತ ನೌಕರರ ಸಂಘ, ಅಕ್ಷರ ದಾಸೋಹ ನೌಕರರ ಸಂಘ, ಆಶಾ ಕಾರ್ಯಕರ್ತೆಯರ ಸಂಘ, ಗ್ರಾಪಂ ನೌಕರರ ಸಂಘ, ಬಿಎಸ್ಸೆನ್ನೆಲ್ ನೌಕರರ ಸಂಘ ಮತ್ತಿತರರ ಕಾರ್ಮಿಕ ಸಂಘಟನೆಗಳ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪಟ್ಟಣದ ಶರಾವತಿ ಸರ್ಕಲ್‌ನಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ತಹಶೀಲ್ದಾರ್ ಕಚೇರಿಯಲ್ಲಿ ಜಮಾಯಿಸಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. ಬಳಿಕ ಮಾತನಾಡಿದ ಸಿಐಟಿಯು ಜಿಲ್ಲಾ ಅಧ್ಯಕ್ಷ ತಿಲಕಗೌಡ, ಜೀವನಾವಶ್ಯಕ ವಸ್ತುಗಳ, ಆಹಾರ ಧಾನ್ಯಗಳ ಬೆಲೆ ಗಗನಕ್ಕೇರಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಮಿತಿಮೀರಿ ಏರಿಕೆ ಮಾಡಿದ್ದಾರೆ. ಕಾರ್ಮಿಕರ ನೈಜ ವೇತನ ಕಡಿಮೆಯಾಗುತ್ತಿದೆ, ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಇದಕ್ಕೆ ಕೇಂದ್ರ ಸರಕಾರವೇ ನೇರ ಹೊಣೆ, ಪಡಿತರ ಪದ್ಧತಿಯನ್ನು ಕುಂಠಿತಗೊಳಿಸಲಾಗುತ್ತಿದೆ ಎಂದರು.
ಕರ್ನಾಟಕ ಪ್ರಾಂತ ರೈತಸಂಘದ ತಾಲೂಕಾಧ್ಯಕ್ಷ ಗಣೇಶ ಭಂಡಾರಿ ಮಾತನಾಡಿ, ರೈತರು ನಮ್ಮ ದೇಶದ ಬೆನ್ನೆಲುಬು ಎಂದು ಘೋಷಣೆ ಮಾತ್ರ ಮಾಡುತ್ತಾರೆ. ಆದರೆ ರೈತರ ಬೆನ್ನು ಮುರಿಯುವ ಕೆಲಸ ಸರಕಾರ ಮಾಡುತ್ತಿದೆ. ರೈತ ಆಹಾರ ಬೆಳೆದರೆ ಮಾತ್ರ ಬದುಕು ಸಾಗಿಸಬಹುದಾಗಿದೆ. ಕೈಗಾರಿಕೋದ್ಯಮವೊಂದನ್ನೇ ಬೆಳೆಸುವುದರಿಂದ ಬಡ ರೈತರಿಗೆ ಯಾವುದೇ ಲಾಭವಿಲ್ಲ ಎಂದರು.
ಸಿಐಟಿಯು ತಾಲೂಕಾಧ್ಯಕ್ಷ ತಿಮ್ಮಪ್ಪ ಗೌಡ ಮಾತನಾಡಿದರು. ಹೋರಾಟದಲ್ಲಿ ಸಿಐಟಿಯು ತಾಲೂಕು ಖಜಾಂಚಿ ಮಂಜುನಾಥ ಗೌಡ, ಕಾರ್ಯದರ್ಶಿ ಗೀತಾ ನಾಯ್ಕ, ಭಾವನಾ ನಾಯ್ಕ, ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಸಾವಿತ್ರಿ ವೈದ್ಯ, ಅಕ್ಷರದಾಸೋಹ ಸಂಘದ ಅಧ್ಯಕ್ಷೆ ಶ್ರೀಮತಿ ನಾಯ್ಕ, ಆಟೊ ಚಾಲಕ ಮಾಲಕ ಸಂಘದ ಅಧ್ಯಕ್ಷ ಶಿವರಾಜ ಮೇಸ್ತ ಮತ್ತಿತರರು ಭಾಗವಹಿಸಿದ್ದರು.







