ಬೇಡಿಕೆಗಳ ಈಡೇರಿಕೆಗೆ ರಾಜ್ಯ ರೈತ ಸಂಘ ಆಗ್ರಹ
ರಾಷ್ಟ್ರೀಯ ಹೆದ್ದಾರಿ ತಡೆದು ಧರಣಿ

ಅಂಕೋಲಾ, ಸೆ.2: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ನೀಲಂಪುರ ಡಾ. ಅಂಬೇಡ್ಕರ ವೃತ್ತದ ಸಮೀಪ ಕರ್ನಾಟಕ ಪ್ರಾಂತ ರೈತ ಸಂಘದವರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶುಕ್ರವಾರ ಹೆದ್ದಾರಿ ತಡೆ ಹಿಡಿದು ಪ್ರತಿಭಟನೆ ನಡೆಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಶಾಂತಾರಾಮ ನಾಯಕ ಮಾತನಾಡಿ, ಅರಣ್ಯ ಅತಿಕ್ರಮಣ ಸಕ್ರಮ, ಅಡಿಕೆ, ತೆಂಗು, ಶೇಂಗಾ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು. ಪಡಿತರ ವಿತರಣೆಯಲ್ಲಿ ಟೋಕನ್ ವ್ಯವಸ್ಥೆಯನ್ನು ಕೈಬಿಡಬೇಕು. ಈ ಕುರಿತು ಸರಕಾರ ಕೂಡಲೇ ಜಾಗೃತರಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆಯನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ತಹಶೀಲ್ದಾರರಿಗೆ ನೀಡಿದರು. ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕಾಧ್ಯಕ್ಷ ಗೌರೀಶ ನಾಯಕ, ಕಾರ್ಯದರ್ಶಿ ಸಂತೋಷ ನಾಯ್ಕ, ಪುರಸಭೆ ಸದಸ್ಯ ಸಂದೀಪ ಬಂಟ, ಪ್ರಮುಖರಾದ ನಾಗೇಶ ಗೌಡ, ರಾಜು ಗೌಡ, ಮಂಗಲಾ ನಾಯ್ಕ, ದೇವಿ ಗೌಡ, ಗೌರೀಶ ನಾಯ್ಕ, ಶಾಂತಾರಾಮ ಹುಲಸ್ವಾರ, ಉದಯ ಗುನಗಾ ಇತರರು ಪಾಲ್ಗೊಂಡಿದ್ದರು.
ಪ್ರತಿಭಟನಾ ಸ್ಥಳದಲ್ಲಿ ತಹಶೀಲ್ದಾರ ವಿ.ಜೆ. ಲಾಂಜೇಕರ, ಸಿಪಿಐ ಅರುಣಕುಮಾರ ಕೋಳೂರು, ಸಿಬ್ಬಂದಿ ಉಪಸ್ಥಿತರಿದ್ದರು.







