ಗ್ರಾಪಂ ನೌಕರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ
.jpg)
ಸಾಗರ, ಸೆ.2: ಗ್ರಾಪಂ ನೌಕರರನ್ನು ಖಾಯಂಗೊಳಿಸಬೇಕು ಹಾಗೂ ಕನಿಷ್ಠ ವೇತನ 18ಸಾವಿರ ರೂ. ನೀಡಬೇಕು ಎಂದು ತಾಲೂಕು ಗ್ರಾಪಂ ನೌಕರರ ಸಂಘದ ಉಪಾಧ್ಯಕ್ಷ ನಾಗೇಶ್ ಕೆ. ವಾಲೆ ಒತ್ತಾಯಿಸಿದ್ದಾರೆ. ತಾಲೂಕು ಗ್ರಾಪಂ ನೌಕರರ ಸಂಘದ ವತಿಯಿಂದ ಶುಕ್ರವಾರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾಪಂ ಎದುರು ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಅನೇಕ ವರ್ಷಗಳಿಂದ ಗ್ರಾಪಂ ಕೆಳದರ್ಜೆಯ ವಿವಿಧ ಹುದ್ದೆಗಳನ್ನು ನಿರ್ವಹಿಸುತ್ತಿರುವ ನೌಕರರು ಉದ್ಯೋಗ ಹಾಗೂ ಜೀವನ ಭದ್ರತೆ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಮ್ಮನ್ನು ಸರಕಾರಿ ನೌಕರರು ಎಂದು ಪರಿಗಣಿಸಿ, ಅವರಿಗೆ ನೀಡುವ ಎಲ್ಲ ವೇತನ ಸೌಲಭ್ಯ, ತುಟ್ಟಿಭತ್ಯೆಯನ್ನು ರಾಜ್ಯ ಸರಕಾರ ನೀಡಬೇಕು ಎಂದು ಒತ್ತಾಯಿಸಿದರು. ತಾಲೂಕಿನಲ್ಲಿ 218 ನೌಕರರು ಇದ್ದೇವೆ. ಗ್ರಾಪಂ ನೌಕರರಿಗೆ ವೇತನಕ್ಕಾಗಿ ಪ್ರತ್ಯೇಕ ಅನುದಾನವನ್ನು ಮೀಸಲಿಡಬೇಕು. ನಿಗಧಿತ ಸಮಯಕ್ಕೆ ನಮಗೆ ವೇತನ ಪಾವತಿಯಾಗುತ್ತಿಲ್ಲ. ಆದರಿಂದ ಪ್ರತಿ ತಿಂಗಳು 5ನೆ ತಾರೀಖಿನೊಳಗೆ ವೇತನ ಪಾವತಿ ಮಾಡಬೇಕು ಎಂದು ಆಗ್ರಹಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಗ್ರಾಪಂ ನೌಕರರ ಬೇಡಿಕೆ ನ್ಯಾಯೋಚಿತವಾಗಿದ್ದು, ಅವರು ಮುಂದಿರಿಸಿರುವ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಾರ್ಯನಿರ್ವಾಹಣಾಧಿಕಾರಿ ಸಿದ್ದಲಿಂಗಯ್ಯ, ಸಂಘದ ಕಾರ್ಯದರ್ಶಿ ಬಾಲಚಂದ್ರ, ಪ್ರಮುಖರಾದ ವೆಂಕಟೇಶ್, ವೀರೇಶ್, ನಾರಾಯಣಪ್ಪ ಮತ್ತಿತರರು ಉಪಸ್ಥಿತರಿದ್ದರು.





