ದೂರ ಶಿಕ್ಷಣದ ಆಮೂಲಾಗ್ರ ಬದಲಾವಣೆಗೆ ಕ್ರಮ
ರಾಜ್ಯದ 74 ಕೇಂದ್ರಗಳ ಮಾನ್ಯತೆ ರದ್ದು

ಶಿವಮೊಗ್ಗ, ಸೆ.2: ಕಳೆದ ವರ್ಷ ಹೊರ ರಾಜ್ಯಗಳಲ್ಲಿ ತೆರೆಯಲಾಗಿದ್ದ ಕುವೆಂಪು ವಿಶ್ವ ವಿದ್ಯಾನಿಲಯ ದೂರ ಶಿಕ್ಷಣ ನಿರ್ದೇಶನಾಲಯದ ಅಧ್ಯಯನ ಕೇಂದ್ರಗಳ ಮಾನ್ಯತೆ ರದ್ದುಗೊಳಿಸಿದ್ದ ಬೆನ್ನಲ್ಲೇ, ಇದೀಗ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತೆರೆಯಲಾಗಿದ್ದ ಅಧ್ಯಯನ ಕೇಂದ್ರಗಳ ಮಾನ್ಯತೆಯನ್ನೂ ರದ್ದುಗೊಳಿಸಿ, ವಿವಿ. ಆಡಳಿತ ಮಹತ್ವದ ಆದೇಶ ಹೊರಡಿಸಿರುವ ಸಂಗತಿ ಬೆಳಕಿಗೆ ಬಂದಿದೆ. ವಿ. ವಿ. ವ್ಯಾಪ್ತಿಯ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿರುವ ಅಧ್ಯಯನ ಕೇಂದ್ರ ಮುಂದುವರಿಸಲು ಹಾಗೂ ತೆರೆಯಲು ಅವಕಾಶ ಕಲ್ಪಿಸಲು ವಿವಿ. ಆಡಳಿತ ನಿರ್ಧರಿಸಿದೆ. ಈ ಮೂಲಕ ದೂರ ಶಿಕ್ಷಣ ವಿಭಾಗದಲ್ಲಿ ಆಮೂಲಾಗ್ರ ಬದಲಾವಣೆ ತರುವುದರ ಜೊತೆಗೆ ಶಿಕ್ಷಣದ ಗುಣಮಟ್ಟ ಉತ್ತಮ ಪಡಿಸಲು ಆಡಳಿತ ಮುಂದಾಗಿದೆ. ವಿ.ವಿಯ ಈ ಕ್ರಮಕ್ಕೆ ವಿದ್ಯಾರ್ಥಿ ಸಂಘಟನೆಗಳು ಸೇರಿದಂತೆ ಪ್ರಜ್ಞಾವಂತ ವರ್ಗದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಿವಿಯ ಭೌಗೋಳಿಕ ವ್ಯಾಪ್ತಿಯ ಹೊರಗಡೆ ತೆರೆಯಲಾಗಿದ್ದ ಅಧ್ಯಯನ ಕೇಂದ್ರಗಳನ್ನು ರದ್ದುಗೊಳಿಸುತ್ತಿರುವ ವಿಷಯವನ್ನು ವಿವಿಯ ಕುಲಪತಿ ಪ್ರೊ. ಜೋಗನ್ ಶಂಕರ್‌ರವರು ಖಚಿತಪಡಿಸಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿ. ವ್ಯಾಪ್ತಿಯ ಜಿಲ್ಲೆ ಹೊರತುಪಡಿಸಿ ಇತರೆ ಜಿಲ್ಲೆಗಳಲ್ಲಿ ತೆರೆಯಲಾಗಿದ್ದ ಅಧ್ಯಯನ ಕೇಂದ್ರಗಳ ಬಾಗಿಲು ಮುಚ್ಚಲು ಸೂಚಿಸಲಾಗಿದೆ. ಒಟ್ಟಾರೆ 74 ಕೇಂದ್ರಗಳ ಮಾನ್ಯತೆ ರದ್ದುಗೊಳಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಹೊರ ರಾಜ್ಯಗಳಲ್ಲಿ ತೆರೆಯಲಾಗಿದ್ದ ಅಧ್ಯಯನ ಕೇಂದ್ರಗಳ ಅನುಮತಿ ರದ್ದುಪಡಿಸಲಾಗಿತ್ತು. ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿರುವ ಅಧ್ಯಯನ ಕೇಂದ್ರಗಳನ್ನು ಮುಂದುವರಿಸಿಕೊಂಡು ಹೋಗಲಾಗುವುದು ಎಂದು ಪ್ರೊ. ಜೋಗನ್ ಶಂಕರ್‌ರವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಶಿವಮೊಗ್ಗ-ಚಿಕ್ಕಮಗಳೂರು ಜಿಲ್ಲೆಗೆ ಮಾತ್ರ ಮಾನ್ಯತೆ
ಹೊರ ಜಿಲ್ಲೆಗಳಲ್ಲಿರುವ ಅಧ್ಯಯನ ಕೇಂದ್ರಗಳನ್ನು ರದ್ದುಗೊಳಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಕುವೆಂಪು ವಿವಿಯು ಸಾರ್ವಜನಿಕ ಪ್ರಕಟನೆ ಹೊರಡಿಸಿದೆ. ಅದರಲ್ಲಿರುವ ಮಾಹಿತಿಯ ಸಂಕ್ಷಿಪ್ತ ವಿವರ ಈ ಮುಂದಿನಂತಿದೆ. ದಿಲ್ಲಿಯ ವಿವಿ. ಧನ ಸಹಾಯ ಆಯೋಗದ ಪತ್ರದಂತೆ ಕುವೆಂಪು ವಿವಿ. ವ್ಯಾಪ್ತಿಯ ಹೊರಗೆ ದೂರ ಶಿಕ್ಷಣ ನೀಡುವ ಉದ್ದೇಶದಿಂದ ಅನುಮತಿಸಿರುವ ಎಲ್ಲ ಅಧ್ಯಯನ ಕೇಂದ್ರಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲು ಆದೇಶಿಸಿದೆ. ಹಾಗೆಯೇ ಕರ್ನಾಟಕ ಸರಕಾರ ಸಹ ಕುವೆಂಪು ವಿವಿ. ಭೌಗೋಳಿಕ ವ್ಯಾಪ್ತಿಯ ಹೊರಗಿರುವ ಎಲ್ಲ ಅಧ್ಯಯನ ಕೇಂದ್ರಗಳನ್ನು ರದ್ದುಗೊಳಿಸಲು ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಾದ್ಯಂತ ವಿವಿಯ ಭೌಗೋಳಿಕ ವ್ಯಾಪ್ತಿಯ ಹೊರಗಿನ, ಶಿವಮೊಗ್ಗ - ಚಿಕ್ಕಮಗಳೂರು ಜಿಲ್ಲೆಗಳನ್ನು ಹೊರತುಪಡಿಸಿ, ಇತರೆಡೆಯಿರುವ ಎಲ್ಲ ದೂರ ಶಿಕ್ಷಣ ಅಧ್ಯಯನ ಕೇಂದ್ರಗಳ ಮಾನ್ಯತೆ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ. ಜೊತೆಗೆ ಅವರೊಂದಿಗೆ ಮಾಡಿಕೊಂಡಿದ್ದ ಒಪ್ಪಂದ ಪತ್ರ ಕೂಡ ರದ್ದುಗೊಳಿಸಲಾಗಿದೆ. ಈ ಕಾರಣದಿಂದ ವಿವಿ. ಭೌಗೋಳಿಕ ವ್ಯಾಪ್ತಿಯ ಹೊರಗೆ ಯಾವ ದೂರ ಶಿಕ್ಷಣ ಅಧ್ಯಯನ ಕೇಂದ್ರವು ಇನ್ನು ಮುಂದೆ ಅಸ್ತಿತ್ವದಲ್ಲಿರುವುದಿಲ್ಲ. ಈ ಕಾರಣದಿಂದ ಇನ್ನು ಮುಂದೆ ವಿವಿಯಲ್ಲಿ ನೇರವಾಗಿ ಮಾತ್ರ ಪ್ರಥಮ ವರ್ಷದ ಸ್ನಾತಕ / ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾಗಳಿಗೆ ನೋಂದಣಿ ಪಡೆಯಬಹುದಾಗಿದೆ. ಇನ್ನು ಮುಂದೆ ವಿವಿ. ಭೌಗೋಳಿಕ ವ್ಯಾಪ್ತಿಯಿಂದ ಹೊರಗಿರುವ ಯಾವುದೇ ಸಂಸ್ಥೆ, ವ್ಯಕ್ತಿಯಿಂದ ನೋಂದಣಿ ಪಡೆದಲ್ಲಿ ಅಂತಹ ನೋಂದಣಿಗೆ ಯಾವುದೇ ಮಾನ್ಯತೆಯಿರುವುದಿಲ್ಲ. ಅಂತಹ ನೋಂದಣಿಗಳಿಗೆ ವಿವಿ. ಯಾವುದೇ ಹೊಣೆಗಾರಿಕೆ ವಹಿಸುವುದಿಲ್ಲ. ಸಾರ್ವಜನಿಕರು, ಆಸಕ್ತ ವಿದ್ಯಾರ್ಥಿಗಳು ಮತ್ತು ಪೋಷಕರು ಗಮನಿಸುವುದು ಎಂದು ಕುವೆಂಪು ವಿವಿಯು ಸಾರ್ವಜನಿಕ ಪ್ರಕಟನೆೆಯಲ್ಲಿ ತಿಳಿಸಿದೆ. ತನ್ನ ಭೌಗೋಳಿಕ ವ್ಯಾಪ್ತಿಯ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆ ಹೊರತುಪಡಿಸಿ ರಾಜ್ಯದ ಇತರೆಡೆ ತೆರೆದಿರುವ ದೂರ ಶಿಕ್ಷಣದ 74 ಅಧ್ಯಯನ ಕೇಂದ್ರಗಳ ಮಾನ್ಯತೆ ರದ್ದುಗೊಳಿಸುವ ಕ್ರಮವನ್ನು ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಪ್ರೋ. ಜೋಗನ್ ಶಂಕರ್‌ರವರು ಖಚಿತಪಡಿಸಿದ್ದಾರೆ. ವಿವಿಯ ಭೌಗೋಳಿಕ ವ್ಯಾಪ್ತಿ ಬಿಟ್ಟು ರಾಜ್ಯದ ಇತರೆ ಜಿಲ್ಲೆಗಳಲ್ಲಿದ್ದ ಅಧ್ಯಯನ ಕೇಂದ್ರಗಳ ಮಾನ್ಯತೆ ಹಾಗೂ ಮಾಡಿಕೊಂಡಿದ್ದ ಒಪ್ಪಂದ ರದ್ದುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು ಮುಂದೆ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಸರಕಾರಿ, ಅನುದಾನಿತ ಕಾಲೇಜುಗಳು ಅಧ್ಯಯನ ಕೇಂದ್ರ ತೆರೆಯಲು ಇಚ್ಛಿಸಿದರೆ ಅನುಮತಿ ನೀಡಲಾಗುವುದು. ಖಾಸಗಿಯವರಿಗೆ ಅಧ್ಯಯನ ಕೇಂದ್ರ ತೆರೆಯಲು ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದೂರ ಶಿಕ್ಷಣ ವಿಭಾಗದ ಆಮೂಲಾಗ್ರ ಸುಧಾರಣೆಗೆ ಕ್ರಮಕೈಗೊಳ್ಳಲಾಗುವುದು. ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಲಾಗುವುದು. ಈಗಾಗಲೇ ಈ ನಿಟ್ಟಿನಲ್ಲಿ ವ್ಯಾಪಕ ಕ್ರಮಕೈಗೊಳ್ಳಲಾಗಿದೆ. - ಪ್ರೋ. ಜೋಗನ್ ಶಂಕರ್ ವಿ.ವಿ. ಕುಲಪತಿ
ಸಾಮೂಹಿಕ ನಕಲಿನ ಭಾರೀ ಆರೋಪ ಕುವೆಂಪು ವಿವಿಯ ದೂರ ಶಿಕ್ಷಣ ನಿರ್ದೇಶನಾಲಯದಡಿ ಹೊರ ಜಿಲ್ಲೆ ಹಾಗೂ ರಾಜ್ಯಗಳಲ್ಲಿ ಅಧ್ಯಯನ ಕೇಂದ್ರ ತೆರೆಯಲಾಗಿತ್ತು. ಕೆಲ ಅಧ್ಯಯನ ಕೇಂದ್ರಗಳಲ್ಲಿ ನಡೆದ ಪರೀಕ್ಷೆಯ ವೇಳೆ ಸಾಮೂಹಿಕ ನಕಲು ಸೇರಿದಂತೆ ಪರೀಕ್ಷಾ ಅಕ್ರಮದ ಭಾರೀ ದೂರುಗಳು ಬಂದಿದ್ದವು. ಕೆಲ ಕೇಂದ್ರಗಳಲ್ಲಿ ನಡೆಯುತ್ತಿದ್ದ ಪರೀಕ್ಷಾ ಅಕ್ರಮದ ಚಟುವಟಿಕೆಗಳು ಮಾಧ್ಯಮಗಳ ಮೂಲಕವು ಬಹಿರಂಗಗೊಂಡಿತ್ತು. ಈ ಪರೀಕ್ಷಾ ಅಕ್ರಮವು ರಾಜ್ಯ ಮಾತ್ರವಲ್ಲದೆ ರಾಷ್ಟ್ರ ಮಟ್ಟದಲ್ಲಿಯೂ ಸುದ್ದಿಯಾಗಿತ್ತು. ಇದರಿಂದ ಇಡೀ ವಿವಿ. ಆಡಳಿತ ಸಾರ್ವಜನಿಕ ವಲಯದಲ್ಲಿ ತೀವ್ರ ಮುಜುಗರಕ್ಕೀಡಾಗುವಂತಾಗಿತ್ತು. ಹಾಗೆಯೇ ವಿದ್ಯಾರ್ಥಿ ಸಂಘಟನೆಗಳು ಸೇರಿದಂತೆ ವಿವಿಧ ವರ್ಗಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇದರಿಂದ ಇದೀಗ ವಿವಿಯು ಹೊರ ಜಿಲ್ಲೆ ಹಾಗೂ ರಾಜ್ಯಗಳಲ್ಲಿ ತೆರೆದಿದ್ದ ಎಲ್ಲ ಅಧ್ಯಯನ ಕೇಂದ್ರಗಳನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡಿದೆ.







