ಭಾರತದ ಖ್ಯಾತ ಸಾಹಿತಿಗೆ ಕಾಶ್ಮೀರ ಕುರಿತು ಭಾಷಣ ಮಾಡಲು ಪಾಕ್ ಅಸೆಂಬ್ಲಿಯಿಂದ ಆಹ್ವಾನ?

ಇಸ್ಲಾಮಾಬಾದ್,ಸೆ.2: ಕಾಶ್ಮೀರದಲ್ಲಿ ಭುಗಿಲೆದ್ದಿರುವ ಹಿಂಸಾಚಾರದ ಬಗ್ಗೆ ಶಾಸಕರಿಗೆ ವಿವರಿಸಲು ಬೂಕರ್ ಪ್ರಶಸ್ತಿ ಪುರಸ್ಕೃತ ಖ್ಯಾತ ಸಾಹಿತಿ ಹಾಗೂ ಮಾನವಹಕ್ಕುಗಳ ಚಳುವಳಿಗಾರ್ತಿ ಅರುಂಧತ್‌ರಾಯ್ ಅವರನ್ನು ಆಹ್ವಾನಿಸಬೇಕೆಂದು ಪಾಕಿಸ್ತಾನದ ಪಂಜಾಬ್ ಅಸೆಂಬ್ಲಿ ಸದಸ್ಯ ಶೇಖ್ ಅಲ್ಲಾವುದ್ದೀನ್ ಸಲಹೆ ನೀಡಿದ್ದಾರೆ. ಪಾಕಿಸ್ತಾನದ ಪಂಜಾಬ್ ಅಸೆಂಬ್ಲಿಯಲ್ಲಿ ಗುರುವಾರ ನಡೆದ ಕಲಾಪದ ವೇಳೆ ಅಲಾವುದ್ದೀನ್, ಈ ಸಲಹೆಯನ್ನು ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಮಿಕ ಹಾಗೂ ಮಾನವಸಂಪನ್ಮೂಲ ಸಚಿವ ರಾಜಾ ಅಶ್ಫಕ್ ಸರ್ವಾರ್ ಅವರು, ಅರುಂಧತಿ ಅವರನ್ನು ಆಹ್ವಾನಿಸುವ ಬಗ್ಗೆ ವಿದೇಶಾಂಗ ಸಚಿವಾಲಯದ ಸಲಹೆಯನ್ನು ಪಡೆದು ಮುಂದಿನ ಹೆಜ್ಜೆಯನ್ನಿಡಬೇಕಾಗಿದೆಯೆಂದು ತಿಳಿಸಿರುವುದಾಗಿ ‘ಡಾನ್ ಆನ್‌ಲೈನ್’ ವರದಿ ಮಾಡಿದೆ.
ಪಾಕಿಸ್ತಾನದ ವಿರುದ್ಧ ಭಾರತದ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ನೀಡಿದ ಹೇಳಿಕೆಯ ಬಗ್ಗೆ ಆಳುವ ಪಕ್ಷದ ಸದಸ್ಯ ರಮೇಶ್ ಸಿಂಗ್ ಆರೋರಾ ಸದನದಲ್ಲಿ ಪ್ರಸ್ತಾಪಿಸಿದ್ದರು. ಪಾರಿಕ್ಕರ್ ಹೇಳಿಕೆ ವಿಷಾದನೀಯವೆಂದು ಬಣ್ಣಿಸಿದ ಅವರು, ಈ ಬಗ್ಗೆ ವಿದೇಶಾಂಗ ಕಾರ್ಯಾಲಯವು ಭಾರತೀಯ ರಾಯಭಾರಿ ಗೌತಮ್ ಬಿಂಬಾವಳೆ ಅವರನ್ನು ಕರೆಯಿಸಿಕೊಂಡು ಪ್ರತಿಭಟನೆ ವ್ಯಕ್ತಪಡಿಸಬೇಕೆಂದು ಅವರು ಆಗ್ರಹಿಸಿದರು.
ಭಾರತ ಸರಕಾರವು ಕಾಶ್ಮೀರಿಗಳ ವಿರುದ್ಧ ದೌರ್ಜನ್ಯವೆಸಗುತ್ತಿದೆ ಮಾತ್ರವಲ್ಲ ಕಾಶ್ಮೀರಕಣಿವೆಯಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆಯೆಂದು ಪಾಕ್ ವಿರುದ್ಧ ಆರೋಪಗಳನ್ನು ಹೊರಿಸುತ್ತಿದೆಯೆಂದು ಆರೋರಾ ದೂರಿದರು. ಇದೇ ಸಂದರ್ಭದಲ್ಲಿ ಸದನದ ಇತರ ಸದಸ್ಯರು, ಜುಐ 9ರಂಜದು ಉಗ್ರಗಾಮಿ ಬುರ್‌ಹಾನ್ ವಾನಿ ಹತ್ಯೆಯ ಬಳಿಕ ಕಾಶ್ಮೀರ ಹಿಂಸಾಚಾರಕ್ಕಾಗಿ ಭಾರತ ಸರಕಾರವನ್ನು ಟೀಕಿಸಿದರು.





