ಕೇಂದ್ರದಿಂದ ರಫ್ತು ಕುಸಿತಕ್ಕೆ ಅಂಕುಶ; ಆರ್ಥಿಕ ಬೆಳವಣಿಗೆಗೆ ಪುನಶ್ಚೇತನ
ಪ್ರಾದೇಶಿಕ ಪತ್ರಿಕಾ ಸಂಪಾದಕರ ಸಮಾವೇಶದಲ್ಲಿ ನಿರ್ಮಲಾ
ಚೆನ್ನೈ,ಸೆ.2: ದೇಶದ ರಫ್ತು ಪ್ರಮಾಣದಲ್ಲಿ ಉಂಟಾಗಿದ್ದ ಕುಸಿತವನ್ನು ತಡೆಹಿಡಿಯಲಾಗಿದ್ದು, ಆರ್ಥಿಕ ಬೆಳವಣಿಗೆಯು ಸ್ಥಿರಗೊಂಡಿದೆಯೆಂದು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಅವರು ಚೆನ್ನೈನಲ್ಲಿ ಶುಕ್ರವಾರ ದಕ್ಷಿಣ ಭಾರತದ ರಾಜ್ಯಗಳ ಪ್ರಾದೇಶಿಕ ಸಂಪಾದಕ ಸಮಾವೇಶದಲ್ಲಿ ಮಾತನಾಡುತ್ತಿದ್ದರು. 2015-16ನೆ ಸಾಲಿನಲ್ಲಿ ದೇಶದ ರಫ್ತು ವೌಲ್ಯವು 262.30 ಶತಕೋಟಿ ಡಾಲರ್‌ಗಳಾಗಿದ್ದು, ಶೇ.15.5 ಶೇ. ಕುಸಿತವನ್ನು ದಾಖಲಿಸಿತ್ತು. ಆದರೆ ಚಹಾ, ತಂಬಾಕು, ಸಂಬಾರ ಪದಾರ್ಥಗಳು, ಹಣ್ಣ, ತರಕಾರಿಗಳು, ಔಷಧ, ಜವಳಿ ಸೇರಿದಂತೆ 12 ವಲಯಗಳಲ್ಲಿ ರಫ್ತು ವೌಲ್ಯದಲ್ಲಿ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿತ್ತು ಎಂದವರು ಹೇಳಿದರು.
ಜಗತ್ತಿನಲ್ಲೇ ಅತಿ ದೊಡ್ಡ ಸಂಬಾರ ಪದಾರ್ಥಗಳ ಉತ್ಪಾದಕ, ರಫ್ತುದಾರ ಹಾಗೂ ಗ್ರಾಹಕ ದೇಶವಾದ ಭಾರತವು 2015-16ನೆ ಸಾಲಿನಲ್ಲಿ 16,238.23 ಕೋಟಿ ರೂ. ವೌಲ್ಯದ 8,43,255 ಟನ್ ಸಂಬಾರ ಪದಾರ್ಥಗಳನ್ನು ಹಾಗೂ ಸಂಬಾರ ಉತ್ಬನ್ನಗಳನ್ನು ರಫ್ತು ಮಾಡಿತ್ತು. 450 ಕೋಟಿ ರೂ. ವೌಲ್ಯದ 5,500 ಟನ್ ಏಲಕ್ಕಿ ರಫ್ತು ಮಾಡಲಾಗಿದು, ಇದು ಸಾರ್ವಕಾಲಿಕ ದಾಖಲಾಗಿದೆಯೆಂದು ಸಚಿವೆ ತಿಳಿಸಿದರು.
ಕಳೆದ ಸಾಲಿನಲ್ಲಿ 1,195 ಮಿಲಿಯ ಕೆ.ಜಿ. ಚಹಾ ಉತ್ಪಾದನೆಯ ಗುರಿಯಿರಿಸ ಲಾಗಿತ್ತಾದರೂ, 1,233 ಮಿಲಿಯ ಕೆ.ಜಿ. ಉತ್ಪಾದನೆಯಾಗಿದ್ದು, ಇದು ಕೂಡಾ ಸಾರ್ವಕಾಲಿಕ ದಾಖಲೆಯೆಂದು ನಿರ್ಮಲಾ ಸೀತಾರಾಮನ್ ಹರ್ಷ ವ್ಯಕ್ತಪಡಿಸಿದರು.
ಕಳೆದ ನಾಲ್ಕು ವರ್ಷಗಳಲ್ಲಿ ಕಾಫಿ ಮಂಡಳಿ ಜಾರಿಗೊಳಿಸಿದ ವಿವಿಧ ಅಭಿವೃದ್ಧಿ ಯೋಜನೆಗಳಿಂದ ಸುಮಾರು ಒಂದು ಲಕ್ಷ ಸಣ್ಣ ಪ್ರಮಾಣದ ಕಾಫಿ ಬೆಳೆಗಾರರು ಪ್ರಯೋಜನವಾಗಿದೆ ಹಾಗೂ 2015-16ರಲ್ಲಿ 3.5 ಲಕ್ಷ ಮೆಟ್ರಿಕ್ ಟನ್ ದಾಖಲೆಯ ಕಾಫಿ ಉತ್ಪಾದನೆಯಾಗಲು ಸಾದ್ಯವಾಗಿದೆಯೆಂದರು. ಕಾಫಿ ಮಂಡಳಿಯು ತನ್ನ ಕಲ್ಯಾಣ ಕಾರ್ಯಕ್ರಮಗಳಿಂದಾಗಿ ಕಾರ್ಮಿಕರು ಹಾಗೂ ಸಣ್ಣ ಬೆಳೆಗಾರರ ಸುಮಾರು 38 ಸಾವಿರ ಮಕ್ಕಳ ಶಿಷ್ಯವೇತನ ಮತ್ತಿತರ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆಂದವರು ತಿಳಿಸಿದರು.
ಕಳೆದ ಸಾಲಿನಲ್ಲಿ ಉತ್ಪಾದಕ ವಲಯದಲ್ಲಿ ಶೇ.9.3ರಷ್ಟು ಬೆಳವಣಿಗೆಯಾಗಿದ್ದು, ಇದು 5-6 ಶೇ. ಬೆಳವಣಿಗೆಯನ್ನು ಕಂಡ ಹಿಂದಿನ 3 ವಿತ್ತ ವರ್ಷಗಳಿಗಿಂತ ಅಧಿಕವೆಂದು ಅವರು ಸಭೆಯ ಗಮನಸೆಳೆದರು. ಮೋದಿ ಸರಕಾರ ಅಧಿಕಾರಕ್ಕೇರಿದ ಬಳಿಕ ದೇಶದ ಕೈಗಾರಿಕಾ ಲೈಸೆನ್ಸಿಂಗ್ ನೀಡಿಕೆ ನೀತಿಯನ್ನು ಸರಳಗೊಳಿಸಲಾಗಿದೆ ಹಾಗೂ ಅವುಗಳ ಸಿಂಧುತ್ವದ ಅವಧಿಯನ್ನು ವಿಸ್ತರಿಸಲಾಗಿದೆಯೆಂದು ಸಚಿವೆ ವಿವರಿಸಿದರು.
ಉದ್ಯಮಗಳ ನಿರ್ವಹಣೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸರಕಾರವು ಎಲ್ಲಾ ರಾಜ್ಯಗಳಲ್ಲಿ 340 ಅಂಶಗಳ ಕ್ರಿಯಾ ಯೋಜನೆಯನ್ನು ಎಲ್ಲಾ ರಾಜ್ಯಗಳ ಜೊತೆ ಹಂಚಿಕೊಂಡಿದೆ ಎಂದು ನಿರ್ಮಲಾ ತಿಳಿಸಿದರು.
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಸ್ಟಾರ್ಟಪ್ ಯೋಜನೆಯ ವಿವರಗಳನ್ನು ಅವರು ಈ ಸಂದರ್ಭದಲ್ಲಿ ನೀಡಿದರು. ಸ್ಟಾರ್ಟಪ್ ಉದ್ಯಮಿಗಳಿಗೆ ಸಾಮಾಗ್ರಿಗಳ ಸಂಗ್ರಹಣೆ ಕುರಿತ ನಿಯಮಗಳನ್ನು ಸಡಿಲಿಸಲಾಗಿದೆಯೆಂದರು. ಸಂಶೋಧನಾ ಕೇಂದ್ರಗಳ ಸ್ಥಾಪನೆಗೆ ಉತ್ತೇಜನ ನೀಡುವುದಕ್ಕಾಗಿ ಅಟಲ್ ಸಂಶೋಧನಾ ಮಿಶನ್ (ಎಐಎಂ) ಹಾಗೂ ಸ್ವ ಉದ್ಯೋಗ್ಯ ಹಾಗೂ ಪ್ರತಿಭಾ ಸದ್ಬಳಕೆ ಕಾರ್ಯಕ್ರಮ (ಎಸ್‌ಇಟಿಯು)ವನ್ನು ಆರಂಭಿಸಲಾಗಿದೆಯೆಂದು ತಿಳಿಸಿದರು.







