ಮಳೆಯ ಆರ್ಭಟ: ಪ್ರವಾಹ ಭೀತಿಯಲ್ಲಿ ಅಸ್ಸಾಂ
ಹೊಸದಿಲ್ಲಿ,ಸೆ.2: ಅಸ್ಸಾಂನ ಬರಾಕ್ ನದಿ ಹಾಗೂ ಅದರ ಉಪನದಿಗಳ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗಿರುವ ಹಿನ್ನೆಲೆಯಲ್ಲಿ ಪ್ರವಾಹದ ಭೀತಿ ಎದುರಾಗಿದೆಯೆಂದು ಕೇಂದ್ರ ಜಲ ಆಯೋಗವು ಶುಕ್ರವಾರ ತಿಳಿಸಿದೆ. ಬಾರಾಕ್ ನದಿಯು ಅಸ್ಸಾಂ ಹಾಗೂ ನೆರೆಹೊರೆಯ ರಾಜ್ಯಗಳಾದ ಮೇಘಾಲಯ ಮತ್ತು ಮಣಿಪುರಗಳಲ್ಲಿ ಮುಂದಿನ ಕೆಲವು ದಿನಗಳವರೆಗೆ ಅಪಾಯದ ಮಟ್ಟವನ್ನು ಮೀರಿ ಹರಿಯುವ ನಿರೀಕ್ಷೆಯಿದೆಯೆಂದು ಅದು ಎಚ್ಚರಿಕೆ ನೀಡಿದೆ.
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಅಸ್ಸಾಂನ ಚಾಚಾರ್,ಹೈಲಾಖಂಡಿ ಹಾಗೂ ಕರೀಂಗಂಜ್ ಜಿಲ್ಲೆಗಳಲ್ಲಿ ನದಿಗಳ ನೀರಿನ ಮಟ್ಟ ಅಪಾಯಕಾರಿ ಮಟ್ಟಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅದು ಸ್ಥಳೀಯ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ.
ಮುಂದಿನ ಎರಡು ಮೂರು ದಿನಗಳಲ್ಲಿ ಬಾರಾಕ್, ಕಟಾಖಾಲ್ ಹಾಗೂ ಕುಶಿಯಾರಾ ನದಿಗಳು ಪ್ರವಾಹ ಪರಿಸ್ಥಿತಿಯೊಂದಿಗೆ ಹರಿಯಲಿವೆ. ಜಿಲ್ಲಾಡಳಿತಕ್ಕೆ ಎಲ್ಲಾ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆಯೆಂದು ಅವರು ತಿಳಿಸಿದರು.





