ಎಡರಂಗ ಸರಕಾರದ ‘ತಪ್ಪು’ ಒಪ್ಪಿಕೊಂಡ ಸಿಪಿಐ
ಸಿಂಗೂರ್ ಭೂ ಸ್ವಾಧೀನ
ಹೈದರಾಬಾದ್,ಸೆ.2: ಟಾಟಾ ಮೋಟಾರ್ಸ್‌ನ ಪ್ರಸ್ತಾಪಿತ ನ್ಯಾನೊ ಕಾರು ನಿರ್ಮಾಣ ಘಟಕಕ್ಕಾಗಿ ಸಿಂಗೂರ್‌ನಲ್ಲಿ ನಡೆಸಲಾದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಹಿಂದಿನ ಎಡರಂಗ ಸರಕಾರದಿಂದ ತಪ್ಪಾಗಿರುವುದನ್ನು ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಶುಕ್ರವಾರ ಒಪ್ಪಿಕೊಂಡಿದೆ.
ಸಾವಿರಾರು ಮಂದಿಗೆ ಉದ್ಯೋಗ ಹಾಗೂ ರಾಜ್ಯಕ್ಕೆ ಆದಾಯವನ್ನು ನೀಡುವಂತಹ ಬೃಹತ್ ಕೈಗಾರಿಕೆಯೊಂದನ್ನು ರಾಜ್ಯಕ್ಕೆ ತರುವ ಸದುದ್ದೇಶದೊಂದಿಗೆ ಸರಕಾರವು ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಆದರೆ ಅದಕ್ಕಾಗಿ ಭೂಸ್ವಾಧೀನ ಮಾಡಿದ ವಿಧಾನವು ಸರಿಯಾಗಿರಲಿಲ್ಲ’’ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಎಸ್.ಸುಧಾಕರ ರೆಡ್ಡಿ ತಿಳಿಸಿದ್ದಾರೆ.
ಪಶ್ಚಿಮಬಂಗಾಳದ ಹಿಂದಿನ ಎಡರಂಗ ಸರಕಾರವು ಸಿಂಗೂರ್‌ನಲ್ಲಿ ನಡೆಸಿದ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸಿ, ಸುಪ್ರೀಂಕೋರ್ಟ್ ಬುಧವಾರ ನೀಡಿದ ತೀರ್ಪಿನ ಬಗ್ಗೆ ಅವರು ಇಂದು ಹೈದರಾಬಾದ್‌ನಲ್ಲಿ ಸುದ್ದಿಗಾರರ ಜೊತೆ ಪ್ರತಿಕ್ರಿಯಿಸುತ್ತಿದ್ದರು.
ಕೈಗಾರಿಕೆಯೊಂದನ್ನು ರಾಜ್ಯಕ್ಕೆ ತರುವ ಪಶ್ಚಿಮ ಬಂಗಾಳದ ಸರಕಾರದ ನಿರ್ಧಾರವು ಒಳ್ಳೆಯ ಉದ್ದೇಶದಿಂದ ಕೂಡಿದ್ದ ಕಾರಣ, ಭೂಸ್ವಾಧೀನದಿಂದಾಗಿ ಸಂತ್ರಸ್ತರಾದ ರೈತರೊಂದಿಗೆ ಈಗ ಕ್ಷಮೆ ಕೇಳುವ ಅಗತ್ಯವಿಲ್ಲವೆಂದು ಸುಧಾಕರ್ ಸ್ಪಷ್ಟಪಡಿಸಿದರು.





