ಇಂದು ಭಾರತ-ಪೊರ್ಟೊರಿಕೊ ಸೌಹಾರ್ದ ಫುಟ್ಬಾಲ್ ಪಂದ್ಯ
ಭಾರತದ ಫುಟ್ಬಾಲ್ ತಂಡದ ನಾಯಕನಾಗಿ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್

ಮುಂಬೈ, ಸೆ.2: ಪೊರ್ಟೊರಿಕೊ ವಿರುದ್ಧ ಶನಿವಾರ ನಡೆಯಲಿರುವ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯಕ್ಕೆ ಭಾರತದ ಫುಟ್ಬಾಲ್ ತಂಡದ ನಾಯಕನಾಗಿ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರನ್ನು ಕೋಚ್ ಸ್ಟೀಫನ್ ಕಾನ್‌ಸ್ಟನ್‌ಟೈನ್ ಶುಕ್ರವಾರ ಆಯ್ಕೆ ಮಾಡಿದ್ದಾರೆ.
ಭಾರತಕ್ಕಿಂತ ಗರಿಷ್ಠ ರ್ಯಾಂಕಿನ ಪೊರ್ಟೊ ರಿಕೊ ವಿರುದ್ಧ ಪಂದ್ಯ ಇಲ್ಲಿನ ಅಂಧೇರಿಯ ಕ್ರೀಡಾ ಸಂಕೀರ್ಣದಲ್ಲಿ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.
ಪೊರ್ಟೊ ರಿಕೊ ವಿರುದ್ಧ ನಾಳೆ(ಶನಿವಾರ)ನಡೆಯಲಿರುವ ಪಂದ್ಯದಲ್ಲಿ ಗುರುಪ್ರೀತ್ ಸಿಂಗ್ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ ಎಂದು ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ಸ್ಟೀಫನ್ ಘೋಷಿಸಿದರು. 24ರ ಹರೆಯದ ಸಿಂಗ್ ಭಾರತವನ್ನು ಮುನ್ನಡೆಸಲಿರುವ ಅತ್ಯಂತ ಕಿರಿಯ ಆಟಗಾರನಾಗಿದ್ದಾರೆ. ಸಿಂಗ್ ಯುರೋಪ್‌ನಲ್ಲಿ ವೃತ್ತಿಪರ ಫುಟ್ಬಾಲ್‌ನ್ನು ಆಡಿದ ಭಾರತದ ಏಕೈಕ ಆಟಗಾರನಾಗಿದ್ದಾರೆ.
ಖಾಯಂ ನಾಯಕ ಹಾಗೂ ಸ್ಟ್ರೈಕರ್ ಸುನೀಲ್ ಚೆಟ್ರಿ ಸ್ಥಾನಕ್ಕೆ ಸಿಂಗ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ಸಿಂಗ್ ಆಯ್ಕೆಯ ಹಿನ್ನೆಲೆಯಲ್ಲಿ ಇತ್ತೀಚೆಗೆ ಅರ್ಜುನ ಪ್ರಶಸ್ತಿ ವಿಜೇತ ಹಿರಿಯ ಗೋಲ್‌ಕೀಪರ್ ಸುಬ್ರತಾ ಪಾಲ್ ಆಡುವ ಬಳಗದಿಂದ ಹೊರಗುಳಿಯುವ ಸಾಧ್ಯತೆಯಿದೆ.
1955ರಲ್ಲಿ ಮುಂಬೈನಲ್ಲಿ ಕೊನೆಯ ಬಾರಿ ಭಾರತ ಹಾಗೂ ಯುಎಸ್‌ಎಸ್‌ಆರ್ ನಡುವೆ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯ ನಡೆದಿತ್ತು. ಫಿಫಾ ರ್ಯಾಂಕಿಂಗ್‌ನಲ್ಲಿ 152ನೆ ಸ್ಥಾನದಲ್ಲಿರುವ ಭಾರತಕ್ಕೆ 114ನೆ ಸ್ಥಾನದಲ್ಲಿರುವ ಪೊರ್ಟೊ ರಿಕೊ ವಿರುದ್ಧ ಜಯ ಸಾಧಿಸಿ ಫಿಫಾ ರ್ಯಾಂಕಿಂಗ್‌ನಲ್ಲಿ ಭಡ್ತಿ ಪಡೆಯುವ ವಿಶ್ವಾಸದಲ್ಲಿದೆ.
ಭಾರತ ಈವರ್ಷ ಆಡುತ್ತಿರುವ 5ನೆ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯ ಇದಾಗಿದೆ. ಪೊರ್ಟೊರಿಕೊ ತಂಡ ಸಂಪರ್ಕದ ವಿಮಾನವನ್ನು ತಪ್ಪಿಸಿಕೊಂಡ ಕಾರಣ ಇಂದು ಸಂಜೆ ನಗರಕ್ಕೆ ಆಗಮಿಸಿದೆ. ಎದುರಾಳಿ ಪೊರ್ಟೊರಿಕೊ ತಂಡ ತಡವಾಗಿ ಭಾರತಕ್ಕೆ ಆಗಮಿಸಿರುವ ಕಾರಣ ಭಾರತಕ್ಕೆ ಲಾಭವಾಗಲಿದೆ ಎಂಬ ವಾದವನ್ನು ಕೋಚ್ ಸ್ಟೀಫನ್ ತಳ್ಳಿಹಾಕಿದರು.
ಪೊರ್ಟೊರಿಕೊ ತಂಡದಲ್ಲಿ ಉತ್ತಮ ಆಟಗಾರರಿದ್ದು, ಅದೊಂದು ಶ್ರೇಷ್ಠ ತಂಡ. ಆ ತಂಡ ಮುಂಬೈಗೆ ತಡವಾಗಿ ಬಂದಿದ್ದರೂ ಆ ತಂಡದ ಗುಣಮಟ್ಟವನ್ನು ತಳ್ಳಿಹಾಕುವಂತಿಲ್ಲ. ಆ ತಂಡದಲ್ಲಿರುವ ಹೆಚ್ಚಿನ ಆಟಗಾರರು ಅಮೆರಿಕ ಮೂಲದವರು. ಯುರೋಪ್‌ನಲ್ಲಿ ಆಡಿರುವ ಅನುಭವ ಅವರಿಗಿದೆ ಎಂದು ಸ್ಟೀಫನ್ ತಿಳಿಸಿದರು.
ಭಾರತ ತಂಡದಲ್ಲಿರುವ 13 ಆಟಗಾರರಲ್ಲಿ 9 ಮಂದಿ ಅಂಡರ್-23 ವಯೋಮಿತಿಯವರು. ಭಾರತದ ಪರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗರಿಷ್ಠ ಗೋಲು ಬಾರಿಸಿರುವ ಸುನೀಲ್ ಚೆಟ್ರಿ ಭಾರತದ ಯುವ ಆಟಗಾರರನ್ನು ಶ್ಲಾಘಿಸಿದರು.







