ಮೂರನೆ ಸುತ್ತಿಗೆ ಮರ್ರೆ, ಸೆರೆನಾ ಲಗ್ಗೆ
ಅಮೆರಿಕನ್ ಓಪನ್ ಟೆನಿಸ್ ಟೂರ್ನಿ
ನ್ಯೂಯಾರ್ಕ್, ಸೆ.2: ವಿಶ್ವದ ನಂ.2ನೆ ಆಟಗಾರ ಆ್ಯಂಡಿ ಮರ್ರೆ ಹಾಗೂ ವಿಶ್ವದ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅಮೆರಿಕನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್‌ನಲ್ಲಿ ಮೂರನೆ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.
ಗುರುವಾರ ಇಲ್ಲಿನ ಅರ್ಥರ್ ಅಶೆ ಸ್ಟೇಡಿಯಂನಲ್ಲಿ ಮುಚ್ಚಿದ ಮೇಲ್ಛಾವಣಿಯ ಕೆಳಗೆ ನಡೆದ ಎರಡನೆ ಸುತ್ತಿನ ಪಂದ್ಯದಲ್ಲಿ ಮರ್ರೆ ಸ್ಪೇನ್‌ನ ಮಾರ್ಸೆಲ್ ಗ್ರಾನೊಲ್ಲರ್ಸ್‌ರನ್ನು 6-4, 6-1, 6-4 ನೇರ ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.
ಇತ್ತೀಚೆಗಿನ ದಿನಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಮರ್ರೆ ಜುಲೈನಲ್ಲಿ ಎರಡನೆ ಬಾರಿ ವಿಂಬಲ್ಡನ್ ಪ್ರಶಸ್ತಿಯನ್ನು ಜಯಿಸಿದ್ದರು. ಆ ಬಳಿಕ ಇತ್ತೀಚೆಗಷ್ಟೇ ನಡೆದ ರಿಯೋ ಒಲಿಂಪಿಕ್ಸ್‌ನಲ್ಲಿ ಸತತ ಎರಡನೆ ಬಾರಿ ಚಿನ್ನದ ಪದಕ ಜಯಿಸಿದ್ದರು.
22,000 ಆಸನ ಸಾಮರ್ಥ್ಯದ ಸ್ಟೇಡಿಯಂನ ಮುಚ್ಚಿದ ಮೇಲ್ಛಾವಣಿಯಿಂದ ಕೆಲವು ಸಮಸ್ಯೆ ಉದ್ಭವಿಸಿದೆ. ನಮ್ಮ ಧ್ವನಿ ಪ್ರತಿಧ್ವನಿಯಾಗುತ್ತಿರುವುದು ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಮರ್ರೆ ದೂರಿದ್ದಾರೆ.
2009ರಲ್ಲಿ ಯುಎಸ್ ಓಪನ್ ಟ್ರೋಫಿ ಜಯಿಸಿದ ಬಳಿಕ ನಾಲ್ಕು ಬಾರಿ ಮಣಿಗಂಟಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಫ್ರಾನ್ಸ್‌ನ ಜುಯಾನ್ ಮಾರ್ಟಿನ್ ಡೆಲ್ ಪೊಟ್ರೊ ಅಮೆರಿಕದ 19ನೆ ಶ್ರೇಯಾಂಕದ ಸ್ಟೀವ್ ಜಾನ್ಸನ್ ವಿರುದ್ಧ 7-6(7/5), 6-3, 6-2 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.
ವಾವ್ರಿಂಕಗೆ ನೇರ ಸೆಟ್‌ಗಳ ಜಯ: ಸ್ವಿಸ್ ಆಟಗಾರ ಸ್ಟಾನಿ ವಾವ್ರಿಂಕ ಇಟಲಿಯ 243ನೆ ರ್ಯಾಂಕಿನ ಅಲೆಸಾಂಡ್ರೊ ಗಿಯಾನ್ನೆಸ್ಸಿ ವಿರುದ್ಧ 6-1, 7-6, 7-5 ನೇರ ಸೆಟ್‌ಗಳಿಂದ ಜಯ ಸಾಧಿಸಿದ್ದಾರೆ.
ಜಪಾನ್‌ನ ಕೀ ನಿಶಿಕೊರಿ ರಶ್ಯದ 20ರ ಹರೆಯದ ಆಟಗಾರ ಕರೆನ್ ಖಚನೊವ್‌ರನ್ನು 6-4, 4-6, 6-4, 6-3 ಸೆಟ್‌ಗಳ ಅಂತರದಿಂದ ಸೋಲಿಸಿದರು. ಆಸ್ಟ್ರೀಯದ ಡೊಮಿನಿಕ್ ಥಿಮ್ ಲೂಥಿಯಾನದ ರಿಚರ್ಡ್ಸ್ ಬೆರ್ನಾಕಿಸ್‌ರನ್ನು 6-4, 6-3, 6-2 ಸೆಟ್‌ಗಳ ಅಂತರದಿಂದ ಸೋಲಿಸಿದರು.
ಸೆರೆನಾಗೆ ಸುಲಭ ಜಯ:
ಮಹಿಳೆಯರ ಸಿಂಗಲ್ಸ್‌ನ 2ನೆ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಆಟಗಾರ್ತಿ ಸೆರೆನಾ ತಮ್ಮದೇ ದೇಶದ ವಾನಿಯಾ ಕಿಂಗ್ ವಿರುದ್ಧ 6-3, 6-3 ನೇರ ಸೆಟ್‌ಗಳ ಅಂತರದಿಂದ ಮಣಿಸಿದರು.
ಸೆರೆನಾರ ಸಹೋದರಿ ವೀನಸ್ ವಿಲಿಯಮ್ಸ್ ಜರ್ಮನಿಯ ಜುಲಿಯಾ ಜಾರ್ಜಸ್ ವಿರುದ್ಧ 6-2, 6-3 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು.
ಮಾಜಿ ಫ್ರೆಂಚ್ ಓಪನ್ ಫೈನಲಿಸ್ಟ್‌ಗಳ ನಡುವೆ ನಡೆದ ಪಂದ್ಯದಲ್ಲಿ 5ನೆ ಶ್ರೇಯಾಂಕಿತೆ ಸಿಮೊನಾ ಹಾಲೆಪ್ ಝೆಕ್‌ನ ಲೂಸಿ ಸಫರೋವಾ ವಿರುದ್ಧ 6-3, 6-4 ನೇರ ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.
ಪೊಲೆಂಡ್‌ನ ಅಗ್ನೆಸ್ಕಾ ರಾಂಡ್ವಾಂಸ್ಕಾ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು ಚೊಚ್ಚಲ ಯುಎಸ್ ಓಪನ್ ಆಡಿದ ಬ್ರಿಟನ್‌ನ ನಯೊಮಿ ಬ್ರಾಡಿ ವಿರುದ್ಧ 7-6(11/9), 6-3 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದ್ದಾರೆ.







