ಮೂಡುಬಿದಿರೆಯಲ್ಲಿ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಗೆ ಚಾಲನೆ
ಕರಾಟೆಗೆ ರಾಜ್ಯ ಸರಕಾರದಿಂದ ಶಕ್ತಿ ತುಂಬುವ ಕೆಲಸ: ಅಭಯಚಂದ್ರ ಜೈನ್ ಭರವಸೆ

ಮೂಡುಬಿದಿರೆ,ಸೆ.3 : ಶೋರಿನ್-ರಿಯೂ ಕರಾಟೆ ಅಸೋಸಿಯೇಶನ್, ರಾಜ್ಯ ಕರಾಟೆ ಶಿಕ್ಷಕರ ಸಂಘ ಶ್ರೀ ಮಹಾವೀರ ಕಾಲೇಜು, ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಂಗಳೂರು ಹಾಗೂ ಎಂ.ಕೆ. ಅನಂತರಾಜ್ ದೈಹಿಕ ಶಿಕ್ಷಣ ಕಾಲೇಜು ಇವರ ಸಹಯೋಗದೊಂದಿಗೆ ಎರಡು ದಿನಗಳ ಕಾಲ ಮಹಾವೀರ ಕಾಲೇಜಿನಲ್ಲಿ ನಡೆಯುವ ರಾಜ್ಯ ಮಟ್ಟದ ಪುರುಷರ ಮತ್ತು ಮಹಿಳೆಯರ ಮುಕ್ತ ಕರಾಟೆ ಚಾಂಪಿಯನ್ ಶಿಪ್‌ನ್ನು ಮಾಜಿ ಸಚಿವ, ಶಾಸಕ ಕೆ. ಅಭಯಚಂದ್ರ ಜೈನ್ ಶನಿವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಕರಾಟೆ ಸ್ವಯಂ ರಕ್ಷಣೆಯನ್ನು ಮಾಡುವ ಕಲೆಯನ್ನು ಹೊಂದಿರುವ ಕ್ರೀಡೆಯಾಗಿದೆ. ಹಿಂದೆ ಈ ಕ್ರೀಡೆಯ ಬಗ್ಗೆ ಹೆಚ್ಚು ಒಲವಿರಲಿಲ್ಲ. ಈಗ ಪೋಷಕರೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಆಗಿದೆ. ಈ ಕ್ರೀಡೆಗೆ ರಾಜ್ಯ ಸರ್ಕಾರವು ಮುಂದಿನ ದಿನಗಳಲ್ಲಿ ಶಕ್ತಿ ತುಂಬುವ ಕೆಲಸ ಮಾಡಲಿದೆ ಎಂದ ಅವರು ಕರಾಟೆ ತರಬೇತುದಾರರು, ಸಂಘಟಕರು ಈ ಕ್ರೀಡೆಯಲ್ಲಿರುವ ಸಮಸ್ಯೆ ಲೋಪದೋಷಗಳಿದ್ದರೆ ನಮ್ಮ ಗಮನಕ್ಕೆ ತನ್ನಿ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಜ್ಯ ಕರಾಟೆ ಶಿಕ್ಷಕರ ಅಸೋಸಿಯೇಶನ್‌ನ ಅಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು ಮಾತನಾಡಿ ಕರಾಟೆ ಶಿಕ್ಷಕರನ್ನು ಗುರುತಿಸುವ ಕೆಲಸ ಸರಕಾರದಿಂದಾಗಬೇಕು. ಜಿಲ್ಲೆಯ ಹಿರಿಯ ಕರಾಟೆ ಪಟುಗಳನ್ನು ಕ್ರೀಡಾ ಇಲಾಖೆ ವತಿಯಿಂದ ಸನ್ಮಾನಿಸಬೇಕು ಎಂದ ಅವರು ಮುಂದಿನ ಒಲಂಪಿಕ್ಸ್‌ನಲ್ಲಿ ಕರಾಟೆಯನ್ನು ಸೇರ್ಪಡೆಗೊಳಿಸಿರುವುದರಿಂದ ಕರಾಟೆ ಪಟುಗಳಿಗೂ ಒಲಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಅವಕಾಶ ಲಭಿಸಿದೆ ಎಂದರು.
ಮಹಾವೀರ ಕಾಲೇಜಿನ ಪ್ರಾಂಶುಪಾಲ ಪ್ರೊ. ಚಂದ್ರಶೇಖರ ದೀಕ್ಷಿತ್ ಅಧ್ಯಕ್ಷತೆ ವಹಿಸಿದ್ದರು. ಶೋರಿನ್-ರಿಯೂ ಕರಾಟೆ ಅಸೋಸಿಯೇಶನ್‌ನ ಅಧ್ಯಕ್ಷ ಅಬುಲ್ ಆಲಾ, ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಶಿಕಲಾ ಮಾತನಾಡಿದರು. ಅಂತರಾಷ್ಟ್ರೀಯ ಖ್ಯಾತೀಯ ತೀರ್ಪುಗಾರರಾದ ಅಣ್ಣಪ್ಪ ಮರಕಲ, ಕರಾಟೆ ಟೀಚರ್ಸ್ ಅಸೋಸಿಯೇಶನ್ ಇಂಡಿಯಾ ಅಧ್ಯಕ್ಷ ಎಂ.ಎಂ ಸಾಜು, ಶೋರಿನ್ ರಿಯೂ ಕರಾಟೆ ಎಸೋಸಿಯೇಶನ್‌ನ ಮುಖ್ಯ ಶಿಕ್ಷಕ ನದೀಂ, ರಾಷ್ಟ್ರೀಯ ಕರಾಟೆ ಪಟು ಸುನಿಲ್ ಕುಮಾರ್, ಮಂಗಳೂರಿನ ಜೂನಿಯರ್ ಇಂಜಿನಿಯರ್ ರಾಘವೇಂದ್ರ, ಕರಾಟೆ ಶಿಕ್ಷಕರಾದ ಸತೀಶ್ ಬೆಳ್ಮಣ್, ಮತ್ತು ಇತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಧನಂಜಯ ಶೆಟ್ಟಿ ಸ್ವಾಗತಿಸಿದರು. ರಾಮ್‌ಪ್ರಸಾದ್ ವಂದಿಸಿದರು. ನವೀನ್ ಅಂಬೂರಿ ಕಾರ್ಯಕ್ರಮ ನಿರ್ವಹಿಸಿದರು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ 1500ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.







