ರಬ್ಬರು ಬೆಳೆಗಾರರಿಗೆ ಕೇರಳ ಮಾದರಿಯಲ್ಲಿ ಬೆಂಬಲಬೆಲೆ ನೀಡುವಂತೆ ಒತ್ತಾಯ :ಶ್ರೀಧರ ಜಿ.ಭಿಡೆ

ಬೆಳ್ತಂಗಡಿ,ಸೆ.3: ನಿರಂತರ ಬೆಲೆಕುಸಿತದಿಂದಾಗಿ ರಬ್ಬರು ಬೆಳೆಗಾರರು ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದು ಬೆಳೆಗಾರರಿಗೆ ಕೇರಳ ಮಾದರಿಯಲ್ಲಿ ಬೆಂಬಲಬೆಲೆ ನೀಡುವಂತೆ ರಾಜ್ಯ ಸರಕಾರವನ್ನು ಈಗಾಗಲೆ ಒತ್ತಾಯಿಸಲಾಗಿದೆ. ಬೆಳೆಗಾರರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ಸರಕಾರಗಳ ಮೇಲೆ ಹೆಚ್ಚಿನ ಒತ್ತಡ ತರಲು ರಾಜ್ಯಮಟ್ಟದ ರಬ್ಬರು ಬೆಳೆಗಾರರ ಸಮಾವೇಶವನ್ನು ಇದೇ ನವೆಂಬರ್ ತಿಂಗಳಿನಲ್ಲಿ ಉಜಿರೆಯಲ್ಲಿ ಆಯೋಜಿಸಲಾಗುವುದು ಎಂದು ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರ ಸಹಕಾರಿ ಸಂಘದ ಅಧ್ಯಕ್ಷ ಶ್ರೀಧರ ಜಿ.ಭಿಡೆ ತಿಳಿಸಿದ್ದಾರೆ.
ಉಜಿರೆಯಲ್ಲಿ ಶನಿವಾರ ಸಂಘದ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಚಾರ ತಿಳಿಸಿದರು. ರಬ್ಬರು ಬೆಳೆಗಾರರಿಗೆ ಬೆಂಬಲ ಬೆಲೆ ನೀಡುವಂತೆ ಸಲ್ಲಿಸಲಾಗಿರುವ ಮನವಿಗಳಿಗೆ ರಾಜ್ಯ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಈ ಬಗ್ಗೆ ಹೆಚ್ಚಿನ ಪ್ರಯತ್ನ ನಡೆಸುವ ಅಗತ್ಯವಿದೆ ದೇಶದಲ್ಲಿ ರಬ್ಬರ್ ಉತ್ಪಾದನೆ ಕುಸಿಯುತ್ತಿದೆ ಇದೀಗ ಭಾರತ ರಬ್ಬರ್ ಉತ್ಪಾದನೆಯಲ್ಲಿ ಆರನೇ ಸ್ಥಾನಕ್ಕೆ ಇಳಿದಿದೆ ಎಂದರು.
ಉಜಿರೆಯ ರಬ್ಬರ್ ಸೊಸೈಟಿ ಕಳೆದ ಆರ್ಧಿಕ ವರ್ಷದಲ್ಲಿ 26.19 ಕೋಟಿ ಲಾಭಗಳಿಸಿದೆ ಈ ಬಾರಿ ಸದಸ್ಯರಿಗೆ ಶೇ 12 ಲಾಭಾಂಶ ವಿತರಿಸಲಾಗುವುದು ಬೆಲೆ ಕುಸಿತದ ನಡುವೆಯೂ ಸಂಸ್ಥೆ ಉತ್ತಮರೀತಿಯಲ್ಲಿ ಕಾರ್ಯನಿರ್ವಹಿಸಿದ್ದು ದೇಶದಲ್ಲಿಯೇ ಅತಿ ಹೆಚ್ಚು ರಬ್ಬರು ವ್ಯವಹಾರ ನಡೆಸುವ ಸಹಕಾರಿ ಸಂಸ್ಥೆಯಾಗಿ ರುಪಗೊಂಡಿದೆ ಎಂದು ತಿಳಿಸಿದರು. 2015-16 ರಲ್ಲಿ ಸಂಘ 12053 ಟನ್ ರಬ್ಬರ್ ವ್ಯವಹಾರ ನಡೆಸಿದ್ದು ಇದು 138.55 ಕೋಟಿಯದ್ದಾಗಿದೆ. ಸಂಸ್ಕರಣ ಘಟಕದಲ್ಲಿ ರೂ 66.15 ಲಕ್ಷದ ವ್ಯವಹಾರ ನಡೆದಿದೆ, ರೂ 3.60 ಕೋಟಿ ತೆರಿಗೆ ಸರಕಾರಕ್ಕೆ ಸಲ್ಲಿಸಿದೆ ಎಂದು ವಿವರಿಸಿದರು. 2015-16 ರಲ್ಲಿ ಸಂಘಕ್ಕೆ ರಬ್ಬರು ಮಾರಾಟ ಮಾಡಿದ ರೈತರಿಗೆ ಪ್ರೋತ್ಸಾಹಕವಾಗಿ ಕಿಲೋ ಒಂದಕ್ಕೆ ರೂ ಒಂದರಂತೆ ನೀಡುವುದಾಗಿ ಪ್ರಕಟಿಸಿದರು. ಜಿಲ್ಲೆಯ ಇತರೆಡೆ ರಬ್ಬರು ವ್ಯವಹಾರ ನಡೆಸುವ ಸಂಸ್ಥೆಗಳಿಗೆ ಮಾರುಕಟ್ಟೆ ಒದಗಿಸುವಲ್ಲಿಯೂ ಸಂಘ ನೆರವಾಗುತ್ತಿದೆ ದೇಶದ ಪ್ರತಿಷ್ಠಿತ ಟಯರ್ ಕಂಪೆನಿಗಳೊಂದಿಗೆ ನೇರವಾಗಿ ವ್ಯವಹಾರ ನಡೆಸುತ್ತಿದೆ ಸದಸ್ಯರ ಅನುಕೂಲಕ್ಕಾಗಿ ಗೋದಾಮು ವ್ಯವಸ್ತೆಯನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎನ್ ಪದ್ಮನಾಭ, ನಿರ್ದೇಶಕರುಗಳಾದ ಜಯಶ್ರೀ ಡಿ. ಎಂ, ಚಿನ್ನಮ್ಮ, ಕೆ ರಾಮನಾಯ್ಕ, ಅಬ್ರಹಾಂ ಬಿ.ಎಸ್, ಇ ಸುಂದರಗೌಡ, ಗ್ರೇಸಿಯನ್ ವೇಗಸ್, ಅನಂತ ಭಟ್ ಎಂ, ವಿ.ವಿ ಅಬ್ರಹಾಂ, ಪದ್ಮಗೌಡ ಹೆಚ್, ಸೋಮನಾಥ ಬಂಗೇರ, ಶಶಿಧರ ಡೋಂಗ್ರೆ, ವಿಶೇಷ ಆಹ್ವಾನಿತರಾದ ಬಾಲಕೃಷ್ಣ ಗೌಡ, ಕೆ.ಜೆ ಅಗಸ್ಟಿನ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜುಶೆಟ್ಟಿ ಉಪಸ್ಥಿತರಿದ್ದರು.







