ಬೆಳ್ತಂಗಡಿ: 8ನೇ ವರ್ಷದ ಸದ್ಗುರು ಪಟ್ಟಾಭಿಷೇಕ ವರ್ಧಂತ್ಯುತ್ಸವ

ಬೆಳ್ತಂಗಡಿ,ಸೆ.3: ಧರ್ಮದ ಅನುಷ್ಠಾನದಲ್ಲಿ ಸೂತ್ರಧಾರಿಗಳು ಬೇರೆ ಪಾತ್ರಧಾರಿಗಳು ಬೇರೆಯಾಗಿದ್ದರೆ, ಸೂತ್ರಧಾರಿಗಳು ಏನನ್ನೂ ಕಳೆದುಕೊಳ್ಳುವುದಿಲ್ಲ ಪಾತ್ರಧಾರಿಗಳು ಸದಾ ಕಳೆದುಕೊಳುದುಕೊಳ್ಳುವವರಾಗಿದ್ದಾರೆ ಈ ಬಗ್ಗೆ ಜಾಗೃತರಾಗುವ ಅಗತ್ಯವಿದೆ. ತಪ್ಪು ದಾರಿ ತುಳಿದಿರುವ ಯುವಕರನ್ನು ಸರಿದಾರಿಗೆ ತರುವ ಕಾರ್ಯವನ್ನು ಸಾಧು ಸಂತರು ಮಾಡಬೇಕು ಎಂದು ರಾಜ್ಯ ಸಭಾ ಸದಸ್ಯ ಬಿ.ಕೆ .ಹರಿಪ್ರಸಾದ್ ಹೇಳಿದರು.
ಅವರು ಶನಿವಾರ ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದಲ್ಲಿನ ಶ್ರೀರಾಮಕ್ಷೇತ್ರದಲ್ಲಿ ಕನ್ಯಾಡಿ ಶ್ರೀಗುರುದೇವ ಮಠದ ಪೀಠಾಧಿಪತಿ, ಶ್ರೀರಾಮಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸರಸ್ವತೀ ಸ್ವಾಮೀಜಿ ಅವರ 8ನೇ ವರ್ಷದ ಸದ್ಗುರು ಪಟ್ಟಾಭಿಷೇಕ ವರ್ಧಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಶಾಂತಿ, ನೆಮ್ಮದಿಗಾಗಿ ಧರ್ಮ ಇದೆ. ಇದನ್ನು ಸಮಾಜದಲ್ಲಿ ನೆಲೆಗೊಳಿಸುವುದಕ್ಕಾಗಿಯೇ ಬಗ್ಗೆ ಸಾಧು-ಸಂತರು ಜನ್ಮ ತಾಳಿರುವುದು. ಹಿಂದುಳಿದವರಿಗೆ ಮಠ,ಮಂದಿರಗಳಿಗೆ ಪ್ರವೇಶ ನಿರಾಕರಿಸಲ್ಪಟ್ಟಿದ್ದ ಸಂದರ್ಭಲ್ಲಿ ನಾರಾಯಣಗುರುಗಳು ಸಮಗ್ರ ಸಮಾಜದ ಒಳಿತಿಗಾಗಿ ಹೋರಾಟವನ್ನೇ ಮಾಡಿದ್ದಾರೆ. ನಮಗೆ ಪ್ರವೇಶವಿಲ್ಲದ ಮಂದಿರಗಳು ನಮಗೆ ಬೇಡ ಎಂದು ಅವರು ಹಿಂದುಳಿದ ಜನಾಂಗಗಳಿಗಾಗಿಯೇ ದೇವಸ್ಥಾನಗಳನ್ನು ನಿರ್ಮಿಸಿದರು. ಸ್ವಾಮೀಜಿಯವರು ಜನರಲ್ಲಿ ಪ್ರೇರಣಾ ಶಕ್ತಿ, ಸ್ವಾಭಿಮಾನ ತುಂಬಿಸುವ ಕೆಲಸ ಮಾಡಬೇಕು ಎಂದು ಅವರು ಆಶಿಸಿದರು.
ರಾಜಕೀಯ ಶಕ್ತಿ, ಧನ ಬಲದ ಸಂಪಾದನೆಯೊಂದೇ ಮುಖ್ಯ ಆಗಿರಬಾರದು. ವಿದ್ಯೆಯೆಂಬ ಶಕ್ತಿಯನ್ನು ಪಡೆಯುವುದೂ ಅವಶ್ಯ. ವಿದ್ಯೆಗಾಗಿ ಶ್ರೀರಾಮ ಕ್ಷೇತ್ರ ಅನುಕೂಲ ಮಾಡಿಕೊಡುತ್ತಿದೆ. ದ..ದಲ್ಲಿ ಸಾಕಷ್ಟು ವಿದ್ಯಾವಂತರಿದ್ದಾರೆ, ಶಿಕ್ಷಣಸಮಸ್ಥೆಗಳೂ ಇದೆ ಆದರೆ ಐಎಎಸ್, ಐಪಿಎಸ್ ಸೇರಿದಂತೆ ಉನ್ನತ ಹುದ್ದೆಗಳಲ್ಲಿ ಯಾರೂ ಕಾಣದಿರುವುದು ವಿಷಾದನೀಯ. ಇಲ್ಲಿನ ಯುವಕರು ಒಂದು ಹಂತದ ಕಲಿಕೆಯ ಬಳಿಕ ಏನಾಗುತ್ತಿದ್ದಾರೆ ಎಂದು ತಿಳಿಯದಾಗಿದೆ. ಈಗ ಕರಾವಳಿಯಲ್ಲಿ ಹಿಂದುಳಿದ ವರ್ಗಗಳ ಯುವಕರು ಬೀದಿಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಉದಾಹರಣೆಗಳ ಮೂಲಕ ವಿವರಿಸಿದ ಅವರು ಯಾಕಾಗಿ ಹೀಗೆ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ ಸಮಾಜದಲ್ಲಿ ಯುವಶಕ್ತಿ ತಪ್ಪುದಾರಿಗೆ ಹೋಗುತ್ತಿದೆ. ಅವರನ್ನು ಯೋಗ್ಯ ದಾರಿಗೆ ಕರೆದುಕೊಂಡು ಹೋಗುವ ಕಾರ್ಯ ಸ್ವಾಮೀಜಿಗಳಿಂದಾಗಬೇಕು ಎಂದು ಅಭಿಪ್ರಾಯಪಟ್ಟರು.
ಸಂಸದ ನಳೀನ್ ಕುಮಾರ್ ಕಟೀಲು ಅವರು ಮಾತನಾಡಿ, ಕನ್ಯಾಡಿಯಲ್ಲಿ ಬೆಳಕನ್ನು ಸೃಷ್ಟಿಸುವ ಕಾರ್ಯ ಶ್ರೀ ಆತ್ಮಾನಂದ ಸರಸ್ವತಿಗಳು ಮಾಡಿದರೆ, ಅದೇ ಬೆಳಕನ್ನು ಇನ್ನಷ್ಟು ಪ್ರಜ್ವಲಿಸುವ ಕಾರ್ಯವನ್ನು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರು ಮಾಡುತ್ತಿದ್ದಾರೆ. ಸಂಸ್ಕಾರಯುತ, ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವ , ಆಧ್ಯಾತ್ಮದ ಜ್ಞಾನವನ್ನು ಪಸರಿಸುವ, ರಾಷ್ಟ್ರದೃಷ್ಟಾರರನ್ನು ತಯಾರು ಮಾಡುವ ಕಾರ್ಯವನ್ನು ಶ್ರೀಗಳು ಮಾಡುತ್ತಿದ್ದಾರೆ. ಸಮಾಜಕ್ಕಾಗಿ ವ್ಯಕ್ತಿಯನ್ನು ಸಿದ್ದಗೊಳಿಸುವ ಕಾರ್ಯ ಗುರುವಿಗೆ ಮಾತ್ರ ಸಾಧ್ಯ. ಈ ಕಾರ್ಯ ಕೇವಲ ಹಿಂದುಳಿದ ವರ್ಗಕ್ಕೆ ಸೀಮಿತಗೊಳಿಸದೆ ಸಮಗ್ರ ಹಿಂದು ಸಮಾಜದ ಒಳಿತಿಗಾಗಿ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕಾಗಿದೆ ಎಂದರು.
ಗುರು ಸಂದೇಶ ನೀಡಿದ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಅವರು, ಭಗವಂತನನ್ನು ಸ್ಮರಿಸುವಾಗ ಮನಸ್ಸು ವಿಚಲಿತವಾಗಬಾರದು. ಸ್ಥಿರವಾದ ಮನಸ್ಸಿನಿಂದಲೇ ಸಾಧನೆ ಸಾಧ್ಯ. ನನ್ನೊಬ್ಬನದೇ ಜೀವನವಲ್ಲ ಎಂಬ ಅರಿವು ಉಂಟಾದಾಗ ಪರಿವರ್ತನೆ ಸಾಧ್ಯ. ಬಲ ಇರುವಲ್ಲಿಗೆ ಧರ್ಮ ಬರಬೇಕು ಎಂಬುದು ಸರಿಯಾದ ನಿಲುವಲ್ಲ ಧರ್ಮ ಇರುವಲ್ಲಿ ಬಲವಿದ್ದಾಗ ಮಾತ್ರ ಸರಿಯಾದ ಕಾರ್ಯಗಳು ನಡೆಯಲು ಸಾಧ್ಯ. ತಮ್ಮ ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸುವುದೇ ಧರ್ಮ ಪಾಲನೆಯಾಗಿರುತ್ತದೆ. ಹಿಂದುಳಿದವರನ್ನು ಜಾತಿ ಆಧಾರವಾಗಿ ನೋಡುವುದು ಸಲ್ಲ. ಜಾತಿ, ವೈಷ್ಯಮ್ಯದಿಂದ ಯಾವುದೇ ದೇಶ ಉದ್ದಾರವಾಗಿಲ್ಲ. ಜಾತೀಯತೆಯನ್ನು ಮಠದೊಳಗೆ ತರಬೇಡಿ. ಎಲ್ಲರನ್ನೂ ಒಳಗೊಂಡ ಮಾನವ ಜನಾಂಗವೆಂಬ ಭಾವನೆ ಮೂಡಬೇಕಾದ ಅಗತ್ಯವಿದೆ. ನಾರಾಯಣ ಗುರುಗಳು ಜಾತೀವಾದಗಳನ್ನು ಮೀರಿ ನಿಂತವರಾಗಿದ್ದರು, ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ವೇದಿಕೆಯಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕಾರ್ಕಳ ಶಾಸಕ ಸುನೀಲ್ ಕುಮಾರ್, ಮಾಜಿ ಶಾಸಕರಾದ ರಘುಪತಿ ಭಟ್ ಉಡುಪಿ, ಕೆ. ಪ್ರಭಾಕರ ಬಂಗೇರ, ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ ಪೀತಾಂಬರ ಹೆರಾಜೆ, ಬೆಳ್ತಂಗಡಿ ಗು.ನಾ.ಸ್ವಾ.ಸೇ.ಸಂಘದ ಅಧ್ಯಕ್ಷ ಭಗೀರಥ ಜಿ., ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ, ಚಲನಚಿತ್ರ ನಿರ್ಮಾಪಕ,ನಟ ರಾಜಶೇಖರ ಕೋಟ್ಯಾನ್, ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷ ಚಂದನ್ ಕಾಮತ್, ವಿವಿಧ ಸಂಘಟನೆಗಳ ಮುಖಂಡರಾದ ಆರ್. ಜಿ. ನಾಯ್ಕ, ದಯಾನಂದ ಬೋಂಟ್ರ, ನವೀನ್‌ಚಂದ್ರ ಡಿ.ಸುವರ್ಣ, ಸಂಜೀವ ಪೂಜಾರಿ, ವಿ.ಎನ್.ನಾಯ್ಕ, ಸುಜಿತಾ ವಿ. ಬಂಗೇರ, ತನುಜಾ ಶೇಖರ್, ಸಾಧು ಪೂಜಾರಿ, ಟ್ರಸ್ಟಿಗಳಾದ ಮೋಹನ್ ಉಜ್ಜೋಡಿ, ಚಿತ್ತರಂಜನ್ ಗರೆಡಿ ಮತ್ತಿತರರು ಉಪಸ್ಥಿತರಿದ್ದರು.
ಧರ್ಮಸ್ಥಳ ಕ್ಷೇತ್ರದ ಪರವಾಗಿ ಸ್ವಾಮೀಜಿಯವರನ್ನು ಗೌರವಿಸಲಾಯಿತು. ವೇದಮೂರ್ತಿ ಲಕ್ಷ್ಮೀಪತಿ ಗೋಪಾಲಾಚಾರ್ಯ ಅವರು ವೈದಿಕ ವಿಧಾನಗಳೊಂದಿಗೆ ಪಟ್ಟಾಭಿಷೇಕದ ಕಾರ್ಯಗಳನ್ನು ನೆರವೇರಿಸಿದರು. ರಾಮಕ್ಷೇತ್ರದ ಟ್ರಸ್ಟಿ ತುಕಾರಾಮ ಸಾಲಿಯಾನ್ ಸ್ವಾಗತಿಸಿ, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಕ್ಷೇತ್ರ ಪರಿಚಯ ಮಾಡಿದರು. ರಾಮಚಂದ್ರ ಮಂಗಳೂರು ಕಾರ್ಯಕ್ರಮ ನಿರ್ವಹಿಸಿದರು.







