2013ರ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ : ಡಾ.ಪ್ರಸಾದ್, ಬಾಲಕೃಷ್ಣ ಭಟ್ ಸಹಿತ ಆರೋಪಿಗಳ ಖುಲಾಸೆ
ಪುತ್ತೂರು,ಸೆ.3 : ಅನುಮತಿ ಪಡೆಯದೆ ಪ್ರತಿಭಟನಾಸಭೆ ನಡೆಸುವ ಮೂಲಕ ಚುನಾಚಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ 2013ರಲ್ಲಿನ ಚುನಾವಣಾ ಸಂದರ್ಭದ ಪ್ರಕರಣಕ್ಕೆ ಸಂಬಂಧಿಸಿ ಆರೋಪ ಎದುರಿಸುತ್ತಿದ್ದ ಪುತ್ತೂರಿನ ಖ್ಯಾತ ವೈದ್ಯ ಡಾ.ಎಂ.ಕೆ.ಪ್ರಸಾದ್ ಭಂಡಾರಿ, ವಿಧಾನ ಪರಿಷತ್ ಮಾಜಿ ಸದಸ್ಯ ಬಾಲಕೃಷ್ಣ ಭಟ್ ಸಹಿತ ಆರು ಮಂದಿಯನ್ನು ಪುತ್ತೂರು ನ್ಯಾಯಾಲಯ ದೋಷಮುಕ್ತಿಗೊಳಿಸಿದೆ.
ಪುತ್ತೂರು ತಾಲೂಕಿನ ಸವಣೂರು ಸಮೀಪದ ಪರಣೆ ಎಂಬಲ್ಲಿ ಕರ್ತವ್ಯ ನಿತರರಾಗಿದ್ದ ಕೆಎಸ್ಸಾರ್ಟಿಸಿ ಬಸ್ ಚಾಲಕ ಪ್ರಶಾಂತ್ ಎಂಬವರ ಮೇಲೆ ನಡೆದಿದ್ದ ಹಲ್ಲೆ ಘಟನೆಯನ್ನು ಖಂಡಿಸಿ ಮತ್ತು ಆರೋಪಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿ 3013ರ ಎಪ್ರಿಲ್ 4ರಂದು ಪುತ್ತೂರಿನ ಕೆಎಸ್ಸಾರ್ಟಿಸಿ ಮಜ್ದೂರ್ ಸಂಘದ ನೇತೃತ್ವದಲ್ಲಿ ಪುತ್ತೂರಿನಲ್ಲಿ ಪ್ರತಿಭಟನೆ ನಡೆದಿತ್ತು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳದೆ ಪ್ರತಿಭಟನಾಸಭೆ ನಡೆಸಿ ಭಾಷಣ ಮಾಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ಡಾ. ಎಂ.ಕೆ. ಪ್ರಸಾದ್ ಭಂಡಾರಿ, ಬಾಲಕೃಷ್ಣ ಭಟ್, ಮಜ್ದೂರ್ ಸಂಘದ ರಾಜ್ಯ ಕಾರ್ಯದರ್ಶಿಯಾಗಿದ್ದ ಶಾಂತಾರಾಮ ವಿಟ್ಲ, ಚಂದ್ರಶೇಖರ್, ದಯಾನಂದ ಕಲ್ಲಡ್ಕ ಸಹಿತ ಆರು ಮಂದಿಯ ವಿರುದ್ದ ಪ್ರಕರಣ ದಾಖಲಾಗಿತ್ತು.
ಚುನಾವಣಾಧಕಾರಿಯಾಗಿದ್ದ ಬಿ.ಪಿ.ರಾಜಶೇಖರ್ ಅವರು ನೀಡಿದ ದೂರಿನಂತೆ ದಾಖಲಾಗಿದ್ದ ಈ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳನ್ನು ನಿರಪರಾಧಿಗಳೆಂದು ಪರಿಗಣಿಸಿ ಖಲಾಸೆಗೊಳಿಸಿದೆ. ಆರೋಪಿಗಳ ಪರವಾಗಿ ವಕೀಲರಾದ ಗಿರೀಶ್ ಮಳಿ, ಗಾಯತ್ರಿ ಕುಮಾರಿ,ಕುಮಾರ್ ಎ.ಪಿ ಮತ್ತು ಸುರಕ್ಷಿತ್ ಸಿ.ಎಚ್ ಅವರು ವಾದಿಸಿದ್ದರು.





