ಕೇಂದ್ರೀಕೃತ ಅಡುಗೆ ಕೇಂದ್ರದ ಮುಖಾಂತರ ಬಿಸಿಯೂಟ ತಯಾರಿಸುವುದನ್ನು ವಿರೋಧಿಸಿ ಪ್ರತಿಭಟನೆ
ಮಂಗಳೂರು, ಸೆ.3:ಶಿಕ್ಷಣ ಸಚಿವರಾಗಿ ಜವಾಬ್ದಾರಿಯನ್ನು ವಹಿಸಿಕೊಂಡ ತನ್ವೀರ ಸೇಠ್‌ರವರು ರಾಜ್ಯದಲ್ಲಿ ಕೇಂದ್ರಿಕೃತ ಅಡುಗೆ ಕೇಂದ್ರಗಳನ್ನು ನಿರ್ಮಿಸಿ ಶಿಕ್ಷಕರ ಮೇಲಿನ ಹೊರೆಯನ್ನು ತಗ್ಗಿಸಲಾಗುವದೆಂದು ತಿಳಿಸಿದ್ದಾರೆ. ಈ ರೀತಿಯ ಯೋಚನೆ ಮತ್ತು ಹೇಳಿಕೆಯನ್ನು ನಮ್ಮ ಸಂಘಟನೆ ವಿರೋಧಿಸುತ್ತದೆ ಎಂದು ಸಿಐಟಿಯು ದ.ಕ. ಜಿಲ್ಲಾ ಸುತಿ ಅಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ ಅವರು ಹೇಳಿದರು.
ಅವರು ಇಂದು ಡಿಡಿಪಿಐ ಕಚೇರಿ ಮುಂದುಗಡೆ ನಡೆದ ಬಿಸಿಯೂಟ ನೌಕರರ ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
2004ರಲ್ಲಿ ಸುಪ್ರೀಂಕೋರ್ಟ್ ಅಡುಗೆ ತಯಾರಿಸುವ ಬಗ್ಗೆ ನೀಡಿರುವ ಮಾರ್ಗದರ್ಶನದ ಪ್ರಕಾರ ಆಗತಾನೆ ಅಡುಗೆ ಬೇಯಿಸಿ ಬಿಸಿ ಬಿಸಿ ಯಾದ ತಾಜಾ ಆಹಾರವಾಗಿ ನೀಡಬೇಕು. ಸರ್ಕಾರ ಕೆಲವೊಂದು ಬೇಡಿಕೆಗಳನ್ನು ಈಡೇರಿಸುವ ಬದಲಿಗೆ ಬಿಸಿಯೂಟ ನೌಕರರನ್ನು ಕೆಲಸದಿಂದ ತೆಗೆಯಲು ಸರಕಾರ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.
ಸಿಐಟಿಯು ಜಿಲ್ಲಾ ಪ್ರ.ಕಾರ್ಯದರ್ಶಿ ಸುನೀಲ್‌ಕುಮಾರ್ ಬಜಾಲ್,ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರಿ, ಜಿಲ್ಲಾ ಮುಂದಾಳು ರಾಮಣ್ಣ ವಿಟ್ಲ ,ಸಂಘದ ಜಿಲ್ಲಾಧ್ಯಕ್ಷ ಪದ್ಮಾವತಿ ಶೆಟ್ಟಿ, ಸಂಘದ ಪ್ರಧಾನ ಕಾರ್ಯದರ್ಶಿ ಗಿರಿಜಾ ಮೂಡಬಿದ್ರಿ, ಖಜಾಂಚಿ ಭವ್ಯ, ಮುಂದಾಳುಗಳಾದ ಶಾಂತ, ಅರುಣ, ಅಂಬಿಕಾ, ಗಿರಿಜಾ, ಯಶೋಧ, ರೇಖಾಲತ, ತುಳಸಿ, ಜಯಂತಿ, ಸಂಧ್ಯಾ, ಸಿದ್ದವ್ವ, ಉಮಾವತಿ, ಜಲಜಾಕ್ಷಿಯವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.







