ಚೀನಾ ವಿಮಾನ ನಿಲ್ದಾಣದಲ್ಲಿ ಒಬಾಮಾಗೆ ಅವಮಾನ ಮಾಡಿದ ಚೀನೀ ಅಧಿಕಾರಿ

ಹಾಂಝು, ಸೆ. 3 : ಶನಿವಾರ ಅಮೇರಿಕಾದ ಅಧ್ಯಕ್ಷರಾಗಿ ತಮ್ಮ ಕೊನೆಯ ಏಷ್ಯಾ ಭೇಟಿಗೆ ಚೀನಾಗೆ ಬರಾಕ್ ಒಬಾಮ ಬಂದಿಳಿದಾಗ ವಿಮಾನ ನಿಲ್ದಾಣದ ಟಾರ್ಮ್ಯಾಕ್ ನಲ್ಲಿ ಅವರನ್ನು ಔಪಚಾರಿಕವಾಗಿ ಸ್ವಾಗತಿಸುವಾಗ ಚೀನೀ ಅಧಿಕಾರಿಯೊಬ್ಬ ಬೊಬ್ಬೆ ಹೊಡೆದಿದ್ದು ಕಪ್ಪು ಚುಕ್ಕೆಯಾಗಿ ಮಾರ್ಪಟ್ಟಿದೆ.
ಚೀನಾದಲ್ಲಿ ನಡೆಯಲಿರುವ ಜಿ 20 ಶೃಂಗ ಸಭೆಗೆ ಭಾರೀ ಭದ್ರತೆ ಏರ್ಪಡಿಸಲಾಗಿದ್ದು ಅಮೇರಿಕಾದ ಅಧ್ಯಕ್ಷರ ಜೊತೆ ಬಂದ ಅಮೇರಿಕಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಹಾಗು ಶ್ವೇತ ಭವನದ ಪತ್ರಿಕಾ ಪ್ರತಿನಿಧಿಗಳಿಗೂ ಇದರಲ್ಲಿ ವಿನಾಯಿತಿ ನೀಡಲಾಗಿರಲಿಲ್ಲ.
ಸಾಮಾನ್ಯವಾಗಿ ಅಮೇರಿಕಾದ ಅಧ್ಯಕ್ಷರ ಜೊತೆ ಬರುವ ಪತ್ರಕರ್ತರು ಅಧ್ಯಕ್ಷರು ವಿಮಾನದಿಂದ ಇಳಿದು ಬರುವುದನ್ನು ನೋಡಲು ವಿಮಾನದ ರೆಕ್ಕೆಯ ಕೆಳಗೆ ನಿಂತಿದ್ದರು. ಆದರೆ ಇದನ್ನು ಸಹಿಸದ ಚೀನೀ ಅಧಿಕಾರಿ ಅಮೇರಿಕಾದ ಪತ್ರಕರ್ತರು ಅಲ್ಲಿಂದ ತೆರಳಬೇಕು ಎಂದು ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಶ್ವೇತ ಭವನದ ಮಹಿಳಾ ಅಧಿಕಾರಿಯೊಬ್ಬರು ಇದು ಅಮೆರಿಕದ ವಿಮಾನ ಹಾಗು ಅವರು ಅಮೇರಿಕಾದ ಅಧ್ಯಕ್ಷ ಎಂದು ಆ ಚೀನೀ ಅಧಿಕಾರಿಗೆ ಹೇಳಿದರು. ಅದಕ್ಕೆ ತಿರುಗೇಟು ನೀಡಿದ ಆ ಚೀನೀ ಅಧಿಕಾರಿ ಇಂಗ್ಲಿಷ್ ನಲ್ಲೆ " ಇದು ನಮ್ಮ ದೇಶ , ಇದು ನಮ್ಮ ವಿಮಾನ ನಿಲ್ದಾಣ " ಎಂದು ಹೇಳಿ ಮುಜುಗರ ಸೃಷ್ಟಿಸಿದರು.







