ಸೆ.8: ರಸ್ತೆ ದುರಸ್ತಿಗೆ ಆಗ್ರಹಿಸಿ ರೈತಸಂಘ ಪ್ರತಿಭಟನೆ
ಪುತ್ತೂರು,ಸೆ.3: ಸವಣೂರು ಗ್ರಾ.ಪಂ. ವ್ಯಾಪ್ತಿಯ ಪಣೆಮಜಲು- ಇಡ್ಯಾಡಿ ರಸ್ತೆಯನ್ನು ದುರಸ್ತಿಗೊಳಿಸುವಂತೆ ಹಾಗೂ ಇನ್ನಿತರ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಸೆ.8ರಂದು ಗ್ರಾ.ಪಂ. ಮುತ್ತಿಗೆ ಹಾಗೂ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ ಬೈಲುಗುತ್ತು ತಿಳಿಸಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸವಣೂರು ಗ್ರಾ.ಪಂ. ವ್ಯಾಪ್ತಿಗೊಳಪಟ್ಟ ಪಣೆಮಜಲು-ಪೆರಿಯಡ್ಕ,-ಕುಕ್ಕುಜೆ-ಕೂಜೋಡಿ- ಇಡ್ಯಾಡಿ ರಸ್ತೆಯು ಕಳೆದ ಒಂದು ದಶಕದಿಂದ ತೀವ್ರ ಹದೆಗೆಟ್ಟಿದ್ದು ಸಂಚಾರಕ್ಕೆ ತೊಡಕಾಗಿದೆ. ರಸ್ತೆ ದುರಸ್ತಿಗೆಂದು ಪಂಚಾಯತ್ ಮತ್ತು ಕೆಲವು ಸ್ಥಾಪಿತ ಹಿತಾಸಕ್ತಿಗಳು ಜೊತೆಯಾಗಿ ಅಕ್ರಮವಾಗಿ ಚಂದಾ ವಸೂಲು ಮಾಡಲು ಮುಂದಾಗಿದೆ. ಇಲ್ಲಿನ ಸರ್ವೆ-ಪಿಲಂಗೂರು ಕಾಲುದಾರಿಯೂ ಹದೆಗೆಟ್ಟಿದ್ದು ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ನಡೆದಾಡುವುದಕ್ಕೂ ಅಯೋಗ್ಯವಾಗಿದೆ. ಗ್ರಾಮದ ಪಡಿತರ ವ್ಯವಸ್ಥೆಯಲ್ಲಿ ಸಮಸ್ಯೆಗಳ ಸರಮಾಲೆಯೇ ತುಂಬಿದೆ. ಗ್ರಾಮದ ನೂರಾರು ಬಡವರಿಗೆ ಇನ್ನೂ ಒಪಡಿತರ ಚೀಟಿ ದೊರಕಿಲ್ಲ. ಪಂಚಾಯತ್ ಮನೆತೆರಿಗೆಯನ್ನು ಯಾವುದೇ ಮಾನದಂಡಗಳಿಲ್ಲದೆ ಹೆಚ್ಚುವರಿಗೊಳಿಸಿ ಬಡವರಿಂದ ಮನಬಂದಂತೆ ಕರ ವಸೂಲು ಮಾಡುತ್ತಿದೆ.
ಈ ಬಗ್ಗೆ ಪಂಚಾಯತ್ ಆಡಳಿತಕ್ಕೆ ಹಲವಾರು ಬಾರಿ ಮನವಿ ನೀಡಿದ್ದರೂ ಯಾವುದೇ ಸ್ಪಂಧನೆ ದೊರಕದ ಹಿನ್ನಲೆಯಲ್ಲಿ ಸಾರ್ವಜನಿಕರ ಈ ಎಲ್ಲಾ ಬೇಡಿಕೆಗಳನ್ನು ಮುಂದಿರಿಸಿ ಪಂಚಾಯತ್ ಮುತ್ತಿಗೆ ಹಾಗೂ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು
ಸುದ್ದಿಗೋಷ್ಠಿಯಲ್ಲಿ ರೈತಸಂಘದ ಜಿಲ್ಲಾ ಉಪಾಧ್ಯಕ್ಷ ಧರ್ಣಪ್ಪ ಗೌಡ ಇಡ್ಯಾಡಿ, ರೈತಮುಖಂಡರಾದ ಇ.ವಿ. ರವೀಂದ್ರ ಇಡ್ಯಾಡಿ, ಪರಮೇಶ್ವರ ಇಡ್ಯಾಡಿ, ಜಗದೀಶ್ ಇಡ್ಯಾಡಿ, ಮನೋಹರ್ ಇಡ್ಯಾಡಿ ಉಪಸ್ಥಿತರಿದ್ದರು.





