ಭಟ್ಕಳ: ಭಟ್ಕಳದಲ್ಲಿ ಶಾಂತಿ ಭಂಗ ಮಾಡುವವರನ್ನು ತಕ್ಷಣ ಬಂಧಿಸುವಂತೆ ಸಹಾಯಕ ಕಮಿಷನರ್ ಗೆ ಪಿ ಎಫ್ ಐ ಮನವಿ

ಭಟ್ಕಳ: ಭಟ್ಕಳದಲ್ಲಿ ಶಾಂತಿ ಭಂಗ ಮಾಡುವವರನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಹಾಯಕ ಕಮಿಷನರ್ ಅವರಿಗೆ ಮನವಿ ಸಲ್ಲಿಸಿದೆ.
ಮನವಿಯಲ್ಲಿ ಕಳೆದ ಕೆಲವು ಸಮಯದಿಂದ ಭಟ್ಕಳದ ಪವಿತ್ರ ಸ್ಥಳದಲ್ಲಿ ಮಾಂಸವನ್ನು ಹಾಕಿ ಭಾವನೆಗಳನ್ನು ಕರೆಳಿಸುವ ಕೆಲಸ ಮಾಡಲಾಗುತ್ತಿದೆ. ಅದೇ ಪ್ರದೇಶದಲ್ಲಿ ಹಿಂದೂ ಮುಸ್ಲಿಂ ಎಲ್ಲರ ಮನೆಗಳಿರುತ್ತಿದ್ದು ಪರಸ್ಪರ ಅನುಮಾನಕ್ಕೆ ಕಾರಣವಾಗುತ್ತಿದೆ. ಅಲ್ಲದೇ ಅಂತಹ ಸ್ಥಳದಲ್ಲಿ ಸೇರಿದ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ರಸ್ತೆ ತಡೆಯಂತಹ ಕ್ರಮಕ್ಕೆ ಮುಂದಾಗುತ್ತಾರೆ. ಪೊಲೀಸರು ಅಲ್ಲಿ ಮೂಕ ಪ್ರೇಕ್ಷಕರಾಗಬೇಕಾಗುತ್ತದೆ. ಇದನ್ನೆಲ್ಲಾ ತಪ್ಪಿಸಲು ಶೀಘ್ರ ಆರೋಪಿಗಳನ್ನು ಬಂಧಿಸುವ ಕ್ರಮವಾಗಬೇಕು ಎಂದೂ ಆಗ್ರಹಿಸಿದೆ. ಇಲ್ಲಿಯ ತನಕ ಪೊಲೀಸರು ಇಂತಹ ಘಟನೆಗಳಲ್ಲಿ ಯಾರನ್ನೂ ಬಂಧಿಸುವಲ್ಲಿ ವಿಫಲರಾಗಿರುವುದು ಮತ್ತೆ ಮತ್ತೆ ಘಟನೆಗಳು ಮರುಕಳಿಸಲು ಕಾರಣವಾಗಿದ್ದು ತಕ್ಷಣ ಸೂಕ್ತ ಕ್ರಮ ಅಗತ್ಯವಾಗಿದೆ. ಮುಂದೆ ಗಣೇಶ ಹಬ್ಬ ಹಾಗೂ ಬಕ್ರೀದ್ ಹಬ್ಬ ಸಮೀಪಿಸುತ್ತಿದ್ದು ಶಾಂತಿ ಸುವ್ಯವಸ್ಥೆ ಕಾಪಾಡಲು ಕಠಿಣ ಕ್ರಮ ಅಗತ್ಯ ಎಂದೂ ಹೇಳಲಾಗಿದೆ.
ಮನವಿಯನ್ನು ಸಹಾಯಕ ಕಮಿಷನರ್ ಅನುಪಸ್ಥಿತಿಯಲ್ಲಿ ಕಚೇರಿ ವ್ಯವಸ್ಥಾಪಕ ಡಿ.ಕೆ. ಮೇಸ್ತ ಪಡೆದು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವ ಭರವಸೆಯನ್ನು ನೀಡಿದರು.





