ಶೈಕ್ಷಣಿಕ ವರ್ಷದಿಂದ ಐಚ್ಛಿಕ ವಿಷಯವಾಗಲಿರುವ ‘ಎನ್ನೆಸ್ಸೆಸ್’: ಪೂಜಾರ
ವಿವಿ ಮಟ್ಟದ ಪ್ರಾಂಶುಪಾಲರ, ರಾ.ಸೇ.ಯೋ.ಅಧಿಕಾರಿಗಳ ಸಭೆ

ಶಿವಮೊಗ್ಗ, ಸೆ.3: ರಾಜ್ಯದ ಪದವಿ ಕಾಲೇಜುಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಸೇವಾ ಯೋಜನೆ (ಎನ್ನೆಸ್ಸೆಸ್)ಯನ್ನು ಒಂದು ಐಚ್ಛಿಕ ವಿಷಯವನ್ನಾಗಿ ಜಾರಿಗೊಳಿಸುವ ಚಿಂತನೆಯನ್ನು ಸರಕಾರ ಮಾಡುತ್ತಿದೆ ಎಂದು ಬೆಂಗಳೂರಿನ ಎನ್ನೆಸ್ಸೆಸ್ ಪ್ರಾಂತೀಯ ಕೇಂದ್ರದ ನಿರ್ದೇಶಕ ಎ.ಎನ್.ಪೂಜಾರ ಹೇಳಿದ್ದಾರೆ.
ಶನಿವಾರ ನಗರದ ಕುವೆಂಪು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆಯ ವಿಶ್ವವಿದ್ಯಾನಿಲಯ ಮಟ್ಟದ ಪ್ರಾಂಶುಪಾಲರ ಮತ್ತು ರಾ.ಸೇ.ಯೋ.ಅಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ಇತ್ತೀಚಿನ ಸಭೆೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದ ಅವರು, ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿಗಳಿಗೆ ಈಗಿರುವ ವಾರದ ಒಟ್ಟು ಕಾರ್ಯಭಾರದಲ್ಲಿ 2 ಗಂಟೆ ವಿನಾಯಿತಿ, ಅವರು ನಿರ್ವಹಿಸಲಿರುವ ಜವಾಬ್ದಾರಿಯ ಬಗ್ಗೆ ಸೇವಾ ಪುಸ್ತಕದಲ್ಲಿ ದಾಖಲು ಮಾಡುವುದು, ಅನ್ಯಕಾರ್ಯ ನಿಮಿತ್ತ ರಜೆ (ಒಒಡಿ) ಸೌಲಭ್ಯ ಹೆಚ್ಚಿಸುವುದು, ಸೇವಾ ಪದೋನ್ನತಿ, ಸ್ಥಾನೀಕರಣದ ಸಂದಭರ್ದಲ್ಲಿ ಎನ್ನೆಸ್ಸೆಸ್ ಸೇವೆಯನ್ನು ಪರಿಗಣಿಸುವುದು ಸೇರಿದಂತೆ ಇನ್ನಿತರ ಹಣಕಾಸಿನ ನೆರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚರ್ಚಿಸಲು ಇದೇ ತಿಂಗಳು 24ರಂದು ಉಡುಪಿಯಲ್ಲಿ ಉನ್ನತ ಶಿಕ್ಷಣ ಸಚಿವರ ನೇತೃತ್ವದಲ್ಲಿ ಎಲ್ಲ ವಿಶ್ವವಿದ್ಯಾನಿಲಯಗಳ ಎನ್ನೆಸ್ಸೆಸ್ ಕಾರ್ಯಕ್ರಮ ಸಂಯೋಜಕರ ಸಭೆ ಕರೆಯಲಾಗಿದೆ ಎಂದು ಅವರು ತಿಳಿಸಿದರು.
ಭಾರತದಲ್ಲಿ ಶೇ.75ರಷ್ಟು ಯುವ ಸಮೂಹವಿದ್ದು ದೇಶದ ಸರ್ವತೋಮುಖ ಬೆಳವಣಿಗೆಯಲ್ಲಿ ಯುವ ಕ್ರಾಂತಿಯನ್ನೇ ಹುಟ್ಟು ಹಾಕುವುದು ಕೇಂದ್ರ-ರಾಜ್ಯ ಸರಕಾರಗಳ ನಿಲುವಾಗಿದೆ. ಈ ನಿಟ್ಟಿನಲ್ಲಿ ಎನ್ನೆಸ್ಸೆಸ್ ಮೂಲಕವೇ ಕಾಲೇಜು ಹಂತದಿಂದಲೇ ಯುವಜನತೆಯನ್ನು ಸನ್ನದ್ದು ಗೊಳಿಸುವುದು ಸರಕಾರಗಳ ಚಿಂತನೆಯಾಗಿದೆ ಎಂದು ಅವರು ಹೇಳಿದರು.
ಇಂದು ದೇಶದಲ್ಲಿ 370 ವಿಶ್ವವಿದ್ಯಾನಿಲಯಗಳಿಂದ ಸುಮಾರು 40 ಲಕ್ಷ ಎನ್ನೆಸ್ಸೆಸ್‌ಸ್ವಯಂ ಸೇವಕರಿದ್ದಾರೆ. ಯಾರೂ ಎನ್ನೆಸ್ಸೆಸ್‌ನ್ನು ಒತ್ತಾಯ ಪೂರ್ವಕವಾಗಿ ಆಯ್ಕೆ ಮಾಡಿಕೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಈ ಸಾಲಿನಿಂದ ಕೇಂದ್ರ ಸರಕಾರವೇ ಇದಕ್ಕೆ ಅವಶ್ಯವಿರುವ ಹಣಕಾಸಿನ ನೆರವನ್ನು ಶೇಕಡಾ ನೂರಕ್ಕೆ ನೂರರಷ್ಟು ನೀಡಲು ತೀರ್ಮಾನಿಸಿದೆ ಎಂದು ಮಾಹಿತಿ ನೀಡಿದರು.
ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ.ಭಟ್ಟರ್ ಲಕ್ಷ್ಮಣ ಶಿದ್ರಾಮಪ್ಪಮತ್ತು ಕುವೆಂಪು ವಿ.ವಿ.ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ. ಜಿ.ಗಣೇಶ ಮಾತನಾಡಿ, ಯಾವುದೇ ಕಾರಣಕ್ಕೂ ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿಗಳಿಗೆ ಕಾಲೇಜಿನಲ್ಲಿ ಬೇರಾವುದೇ ಘಟಕಗಳ ಜವಾಬ್ದಾರಿಯನ್ನು ನೀಡಬಾರದು. ಒಂದು ವೇಳೆ ನೀಡಿದ್ದರೆ ಅವುಗಳನ್ನು ವಾಪಸ್ ಪಡೆದು ಬೇರೆಯವರಿಗೆ ಆ ಕೆಲಸ ವಹಿಸಬೇಕು. ಇದನ್ನು ಪ್ರಾಂಶುಪಾಲರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಾಕೀತು ಮಾಡಿದರು. ಅಲ್ಲದೇ ಇಂದಿನ ಸಭೆಗೆ ಗೈರು ಹಾಜರಾದ ಪ್ರಾಂಶುಪಾಲರು ಮತ್ತು ಕಾರ್ಯಕ್ರಮಾಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿದರು.
ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ಸಿ.ಗೌಡರ ಶಿವಣ್ಣ ಸಾಂದರ್ಭಿಕವಾಗಿ ಮಾತನಾಡಿದರು. ಕುವೆಂಪು ವಿ.ವಿ.ರಾಸೇಯೋ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಕುಂದನ್ ಬಸವರಾಜ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಮಲಾ ನೆಹರೂ ಮಹಿಳಾ ಕಾಲೇಜಿನ ಎಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಡಾ. ಬಾಲಕೃಷ್ಣ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.







