ಗಣೇಶ ಚತುರ್ಥಿ ಸಂಭ್ರಮ: ಎಲ್ಲಿ ನೋಡಿದರೂ ಜನದಟ್ಟಣೆ

ಮೂಡಿಗೆರೆ, ಸೆ.3: ಗೌರಿ ಮತ್ತು ಗಣೇಶ ಚತುರ್ಥಿ ಹಬ್ಬದ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ತಾಲೂಕಿನ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಜನರು ಶನಿವಾರ ಪಟ್ಟಣಕ್ಕೆ ಆಗಮಿಸಿ ಹಬ್ಬಕ್ಕೆ ಬೇಕಾದ ಹೂ, ಹಣ್ಣು, ತರಕಾರಿ ಹಾಗೂ ದಿನಸಿ ಸಾಮಗ್ರಿಗಳನ್ನು ಮುಗಿಬಿದ್ದು ಖರೀದಿಸಿದರು.
ಸೆ. 2ರಂದು ಬಂದ್ ಹಿನ್ನೆಲೆಯಲ್ಲಿ ಶುಕ್ರವಾರ ಸಂತೆಯ ದಿನ ಜನ ಪಟ್ಟಣದತ್ತ ಸುಳಿದಿರಲಿಲ್ಲ. ಸಾರಿಗೆ ಬಸ್‌ಗಳು ಬಂದ್‌ನಲ್ಲಿ ಬೆಂಬಲ ಸೂಚಿಸಿದ್ದರಿಂದ ಸಹಜವಾಗಿಯೇ ಹಬ್ಬದ ಖರೀದಿಗಾಗಿ ಮಾರ್ಕೆಟ್ ಹಾಗೂ ಸಂತೆಗೆ ಗ್ರಾಮೀಣ ಪ್ರದೇಶದ ಜನರು ಪಟ್ಟಣಕ್ಕೆ ಆಗಮಿಸಲು ಸಾಧ್ಯವಾಗಿರಲಿಲ್ಲ. ಶನಿವಾರ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಜನಜಂಗುಳಿ ಹಾಗೂ ವಾಹನಗಳ ದಟ್ಟಣೆ ಹೆಚ್ಚಾಗಿ ಕಂಡು ಬಂತು. ಅಂಗಡಿ, ಹೋಟೆಲ್, ಹೂ, ಹಣ್ಣು, ತರಕಾರಿ ಹಾಗೂ ಪೂಜಾ ಸಾಮಗ್ರಿ ಖರೀದಿಗೆ ನಾ ಮುಂದು ತಾ ಮುಂದು ಎಂದು ಮುಗಿಬಿದ್ದು ಖರೀದಿಸುತ್ತಿರುವ ದೃಶ್ಯ ಗಳು ಸಾಮಾನ್ಯವಾಗಿತ್ತು. ಬೆಲೆ ಏರಿಕೆಯನ್ನು ಲೆಕ್ಕಿಸದೆ ಖರೀದಿದಾರರ ಜನಜಂಗುಳಿಯಲ್ಲಿ ತಮಗೂ ಸರಕು ಸಾಮಗ್ರಿಗಳು ಸಿಕ್ಕರೆ ಸಾಕೆಂದು ಬೆಲೆ ಎಷ್ಟಾದರೂ ನೀಡಿ ಕೊಂಡುಕೊಳ್ಳುತ್ತೇವೆ ಎನ್ನುತ್ತ ಖರೀದಿ ಕೇಂದ್ರಗಳ ಮುಂದೆ ಸಾಲುಗಟ್ಟಿ ಜನರು ನಿಂತಿದ್ದರು. ರವಿವಾರ ಗೌರಿ ಹಬ್ಬದಂದು ಸಿಹಿಯೂಟ, ಸೋಮ ಾರದ ಗಣೇಶ ಚತುರ್ಥಿಯಂದು ಬಾಡೂಟ ಭೋಜನಕ್ಕಾಗಿಯೂ ಸಿದ್ಧತೆಗಳ ಖರೀದಿಯೂ ಜೋರಾಗಿಯೆೀ ನಡೆದವು. ಈ ಹಿನ್ನೆಲೆಯಲ್ಲಿ ಮೂಡಿಗೆರೆ ಪಟ್ಟಣದ ಕೆ.ಎಂ. ರಸ್ತೆ, ಎಂ.ಜಿ. ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿಯೂ ಶನಿವಾರ ಬೆಳಗ್ಗೆ 6ರಿಂದ ಸಂಜೆಯವರೆಗೆ ಖರೀದಿದಾರರ ವಾಹನಗಳ ದಟ್ಟಣೆ ದುಪ್ಪಟ್ಟಾಗಿತ್ತು. ಸುಗಮ ವಾಹನ ಸಂಚಾರಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದುದು ಸಾಮಾನ್ಯ ಎನ್ನುವಂತಿತ್ತು.





