ಸಮಾಜದ ಬೆಳವಣಿಗೆಗೆ ಚಿತ್ರಕಲೆ ಪೂರಕವಾಗಿರಲಿ: ರಾಜಲಕ್ಷ್ಮೀ ಬಿ.ಜೋಷಿ
ಮಲೆನಾಡು ಚಿತ್ರಕಲಾ ಶಿಬಿರದ ಸಮಾರೋಪ

ಚಿಕ್ಕಮಗಳೂರು, ಸೆ.3: ಚಿತ್ರಕಲೆ ಮನೋ ಉದ್ವೇಗಕ್ಕಿಂತ ಮನಸ್ಸಿಗೆ ಶಾಂತಿ, ನೆಮ್ಮದಿ, ಸಂತೋಷ ಕೊಡುವಂತಿರಲಿ. ಆರೋಗ್ಯಕರ ಸಮಾಜದ ಬೆಳವಣಿಗೆಗೆ ಪೂರಕವಾಗಿರಬೇಕೆಂದು ರಾಜಲಕ್ಷ್ಮೀ ಬಿ.ಜೋಷಿ ಅಭಿಪ್ರಾಯಿಸಿದರು.
ನಗರದ ಕರ್ನಾಟಕ ಲಲಿತಕಲಾ ಅಕಾಡಮಿಯಲ್ಲಿ ಜಿಲ್ಲಾ ಶಿಕ್ಷಕರ ಸಂಘವು ಹೊರನಾಡು ಶ್ರೀಕ್ಷೇತ್ರದಲ್ಲಿ ಆಯೋಜಿಸಿದ್ದ ಮೂರು ದಿನಗಳ ರಾಜ್ಯ ಮಟ್ಟದ ಮಲೆನಾಡು ಚಿತ್ರಕಲಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಿತ್ರಕಲೆಯನ್ನು ಆಸ್ವಾದಿಸದವರೆ ಇಲ್ಲ. ದೇವರು ಜಗತ್ತನ್ನು ಅನನ್ಯವಾಗಿ ರೂಪಿಸಿದ್ದಾನೆ. ಪ್ರಕೃತಿಯಲ್ಲಿ ಕಲಾತ್ಮಕ ಮೇಳೈಸಿದೆ. ಪ್ರತಿಯೊಬ್ಬರೂ ಒಂದಿಲ್ಲೊಂದು ರೀತಿಯಲ್ಲಿ ಚಿತ್ರ ಬರೆಯುವವರೆ. ಹೆಣ್ಣುಮಕ್ಕಳು ನಿತ್ಯ ಮನೆಯಂಗಳದಲ್ಲಿ ರಚಿಸುವ ರಂಗೋಲಿ ಇದಕ್ಕೊಂದು ನಿದರ್ಶನ. ಚಿತ್ರಕಲೆಯಲ್ಲಿ ಆಸಕ್ತಿ ಅಭಿರುಚಿ ಹೊಂದಿ ಸೂಕ್ತ ತರಬೇತಿ-ಪರಿಣತಿ ಪಡೆದರೆ ಅಜರಾಮರರಾಗಬಹುದು. ಮೊನಾಲಿಸಾ ಈಗಲೂ ಪ್ರಖ್ಯಾತ ಚಿತ್ರವಾಗಿ ಉಳಿದಿದೆ. ರಾಜಾ ರವಿವರ್ಮನ ಕುಂಚದ ಕಲೆಗೆ ತಲೆಬಾಗದವರೇ ಇಲ್ಲವೆಂದರು. ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಂ.ರಾಜಶೇಖರ್ ಮಾತನಾಡಿ, ಜಿಲ್ಲೆಯ ಚಿತ್ರಕಲಾ ಇತಿಹಾಸದಲ್ಲಿ ಡಾ. ರವೀಶ್ ಕಾಸರವಳ್ಳಿ ಅವರದು ದೊಡ್ಡ ಹೆಸರು. ಇವರ ಚಿತ್ರಗಳು ರಾಷ್ಟ್ರದ ಪ್ರಮುಖ ಪತ್ರಿಕೆಗಳಲ್ಲೂ ಗಮನಸೆಳೆದಿವೆ. ಸಾಂಸ್ಕೃತಿಕ ಪರಂಪರೆಗೆ ಅಪಾರ ಕೊಡುಗೆ ನೀಡುತ್ತಿರುವ ಚಿತ್ರಕಲೆಗೆ ಸರಕಾರ ಸರಿಯಾದ ಪ್ರೋತ್ಸಾಹ ನೀಡಬೇಕಾಗಿದೆ ಎಂದರು.
ಲಲಿತಕಲಾ ಅಕಾಡಮಿ ಸದಸ್ಯ ದಾವಣಗೆರೆ ಮಹಾಲಿಂಗಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಕಾಡಮಿ ಸುವರ್ಣ ಸಂಭ್ರಮದ ಅಂಗವಾಗಿ ಎರಡು ವರ್ಷಗಳಲ್ಲಿ 60ಕ್ಕೂ ಹೆಚ್ಚು ಕಲಾ ಶಿಬಿರಗಳನ್ನು ರಾಜ್ಯದ ವಿವಿಧೆಡೆ ನಡೆಸುವ ಮೂಲಕ ಯುವ ಹಾಗೂ ಗ್ರಾಮೀಣ ಕಲಾವಿದರನ್ನು ಪ್ರೋತ್ಸಾಹಿಸಲಾಗುತ್ತಿದೆ. ಹೊರನಾಡು ಕ್ಷೇತ್ರದಲ್ಲಿ ಚಿತ್ರಕಲಾ ಶಿಬಿರ ಯಶಸ್ವಿಯಾಗಿದೆ. ಕಲಾವಿದರ ಕೃತಿಗಳನ್ನು ಸಾರ್ವಜನಿಕರು ವೀಕ್ಷಿಸಲು ಅನುಕೂಲವಾಗುವಂತೆ ಕಲಾ ಗ್ಯಾಲರಿ ನಿರ್ಮಿಸಲು ಮನವಿ ಮಾಡಿದರು.
ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಮಾತನಾಡಿದರು. ಕಲಬುರಗಿ, ಯಾದಗಿರಿ, ವಿಜಯಪುರ, ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 30 ಕಲಾವಿದರ ತಂಡ ಮೂರು ದಿನಗಳ ಕಾಲ ತರಬೇತಿ ಪಡೆದು ರಚಿಸಿದ 60 ಕಲಾಕೃತಿಗಳು ಚಿತ್ರ ಕಲಾಪ್ರದರ್ಶನದಲ್ಲಿ ಗಮನ ಸೆಳೆದವು.
ಕಲಾವಿದರಾದ ಎಚ್.ಎಂ. ರೇಣುಕಪ್ಪ ಸ್ವಾಗತಿಸಿ, ಸತ್ಯಪ್ರಕಾಶ ನಿರೂಪಿಸಿ, ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್. ನಾಗರಾಜ್ ವಂದಿಸಿದರು. ಸಂಘದ ಉಪಾಧ್ಯಕ್ಷ ಆರ್.ಎಂ.ಕಟ್ಟಿಮನಿ, ಕಾರ್ಯದರ್ಶಿ ರವಿಕುಮಾರ, ನಿರ್ದೇಶಕ ಲಿಂಗರಾಜು ಮತ್ತಿತರರು ಉಪಸ್ಥಿತರಿದ್ದರು.







