ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಯೋಜನೆಗಳು ನನೆಗುದಿಗೆ: ಜಿಪಂ ಸದಸ್ಯ ಮಹೇಶ್ ಒಡೆಯರ್
ಜನಸ್ಪಂದನ ಕಾರ್ಯಕ್ರಮ

ಕಡೂರು, ಸೆ.3: ಸರಕಾರಗಳು ದ್ವಂದ್ವ ನೀತಿಗಳನ್ನು ಅನುಸರಿಸುತ್ತಿರುವ ಕಾರಣ ಸರಕಾರಿ ಯೋಜನೆಗಳು ಫಲಾನುಭವಿಗಳ ತನಕ ತಲುಪುತ್ತಿಲ್ಲ. ಇದಕ್ಕೆ ಅಧಿಕಾ ರಿಗಳ ನಿರ್ಲಕ್ಷ್ಯತನವೇ ಮುಖ್ಯ ಕಾರಣವಾಗಿದೆ ಎಂದು ಸಿಂಗಟಗೆರೆ ಜಿಪಂ ಸದಸ್ಯ ಮಹೇಶ್ ಒಡೆಯರ್ ತಿಳಿಸಿದರು.
ಅವರು ತಾಲೂಕಿನ ದೇವಿರಹಳ್ಳಿ ಗ್ರಾಮದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು. ಈಗಾಗಲೇ ಹಲವಾರು ತಿಂಗಳುಗಳಿಂದ ಸಿಂಗಟಗೆರೆ ಭಾಗದಲ್ಲಿ ಮಳೆಯಾಗದೆ ಬೇಸಿಗೆಯ ವಾತಾವರಣ ನಿರ್ಮಾಣವಾಗಿದೆ. ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದೆ. ಜಿಲ್ಲಾಧಿಕಾರಿಗಳು ಬೋರ್‌ವೆಲ್ ಕೊರೆಸಲು ಅವಕಾಶವಿಲ್ಲವೆಂದು ಆದೇಶ ನೀಡುತ್ತಾರೆ. ಇದರಿಂದ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಂತಾಗಲಿದೆ. ಬೋರ್‌ವೆಲ್ ಕೊರೆಸಲು ಅವಕಾಶ ನೀಡಬೇಕಿದೆ ಎಂದು ತಿಳಿಸಿದರು.
ತಾಲೂಕಿನಲ್ಲಿ 27ಕ್ಕೂ ಹೆಚ್ಚು ಇಲಾಖೆಗಳಿದ್ದು, ಕೇವಲ 13 ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದಾರೆ. ಈ ಸಭೆಗೆ ಬಾರದೇ ಇರುವ ಅಧಿಕಾರಿಗಳ ವಿರುದ್ಧತಹಶೀಲ್ದಾರರು ಕ್ರಮ ಕೈಗೊಳ್ಳಬೇಕಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ದೂರು ನೀಡಲಾಗಿದೆ. ಅಧಿಕಾರಿಗಳು ಸಭೆಗಳಿಗೆ ಆಗಮಿಸಿ, ಜನರು ಇಟ್ಟಿರುವ ನಂಬಿಕೆಗೆ ಸಮರ್ಪಕವಾಗಿ ನಡೆದುಕೊಳ್ಳಬೇಕಿದೆಎಂದು ತಿಳಿಸಿದರು.
ಭೆಯಲ್ಲಿ ಸಿಂಗಟಗೆರೆ ಗ್ರಾಪಂ ಸದಸ್ಯೆ ಲತಾ ಮಾತನಾಡಿ, ಯಾವುದೇ ಸಮಸ್ಯೆಗಳುಗ್ರಾಪಂ ಮಟ್ಟದಲ್ಲಿ ಪರಿಹಾರವಾಗಬೇಕಿದೆ. ಇದರ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕಿದೆ. ಗ್ರಾಮ ಸಭೆ, ವಾರ್ಡ್ ಸಭೆ, ಜನಸ್ಪಂದನ ಕಾರ್ಯಕ್ರಮಗಳಿಗೆ ಮೆಸ್ಕಾಂ ಅಧಿಕಾರಿಗ ಳಾಗಲೀ, ಪ್ರಮುಖ ಇಲಾಖೆಯ ಅಧಿಕಾರಿಗಳಾಗಲೀ ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮನಹಳ್ಳಿ ಗ್ರಾಪಂ ಸದಸ್ಯ ಆಬೀದ್ ಪಾಷ ಮಾತನಾಡಿ, ಸಿದ್ದರಾಮನಹಳ್ಳಿ ಗ್ರಾಮದಲ್ಲಿಅಂಗನವಾಡಿ ಕಟ್ಟಡ ನಿರ್ಮಾಣವಾಗಿ 35 ವರ್ಷ ಕಳೆದಿದ್ದು, ಬೀಳುವ ಸ್ಥಿತಿಯಲ್ಲಿದೆ. ಹೊಸ ಕಟ್ಟಡ ಆಗಬೇಕಿದೆ. ಕೆಲವು ಕಡೆ ವಿದ್ಯುತ್ ತಂತಿಗಳು ಹಾಳಾಗಿವೆ. ಯಾವುದೇ ಮನವಿ ಮಾಡಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು. ಸಭೆಯ ಅಧ್ಯಕ್ಷತೆಯನ್ನು ಎಸ್.ಮಾದಾಪುರ ಗ್ರಾಮದ ಅಧ್ಯಕ್ಷೆ ಆಶಾ ಮಹೇಶ್ ವಹಿಸಿದ್ದರು. ತಹಶೀಲ್ದಾರ್ ಭಾಗ್ಯಾ, ನೋಡೆಲ್ ಅಧಿಕಾರಿ ದಿನೇಶ್, ಕೃಷಿ ಅಧಿಕಾರಿ ಶಿವಕುಮಾರ್, ಅರಣ್ಯಾಧಿಕಾರಿ ಮೋಹನ್, ಪಶು ಇಲಾಖಾ ಅಧಿಕಾರಿ ಲಿಂಗರಾಜು ಉಪಸ್ಥಿತರಿದ್ದರು.







