ಪಠ್ಯದೊಂದಿಗೆ ಕ್ರೀಡೆಗೂ ಶಿಕ್ಷಕರು ಪ್ರೋತ್ಸಾಹ ನೀಡಲಿ: ಶ್ರೀಕಂಠೇಶ್ವರ

ಕಡೂರು, ಸೆ.3: ಕಡೂರು ವಲಯದಲ್ಲಿ 830 ಶಿಕ್ಷಕ ರಿದ್ದು, ಈ ಶಿಕ್ಷಕರು ಹೆಚ್ಚಾಗಿ ಕ್ರೀಡೆಗಳ ಕಡೆಗೆ ಆಸಕ್ತಿ ಹೊಂದಬೇಕು ಎಂದು ಕಡೂರು ಶಿಕ್ಷಣಾಧಿಕಾರಿ ಶ್ರೀಕಂಠೇಶ್ವರ ತಿಳಿಸಿದರು.
ಅವರು ಶನಿವಾರ ಪಟ್ಟಣದ ತಾಲೂಕು ಕ್ರೀಾಂಗಣದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘ ಹಮ್ಮಿಕೊಂಡಿದ್ದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ದೇಶದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ದೊರಕುತ್ತಿಲ್ಲ. ಶಿಕ್ಷಕರು ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು.
ತಾಲೂಕು ನೌಕರರ ಸಂಘದ ಅಧ್ಯಕ್ಷ ಎಸ್.ಎಂ. ಮಂಜುನಾಥ್ ಮಾತನಾಡಿ, ಶಿಕ್ಷಕರು ಕ್ರೀಡಾಕೂಟದ ಸದುಪಯೋಗ ಪಡೆದುಕೊಳ್ಳಬೇಕಿದೆ. ಆದರೆ ಕ್ರೀಡೆಗೆ ಶಿಕ್ಷಕರೇ ಇಲ್ಲದಿದ್ದರಿಂದ ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮ ಬೇಕೇ, ಬೇಡವೇ ಎನ್ನುವ ನಿರ್ಧಾರಕ್ಕೆ ಬರಬೇಕಿದೆ. ಸೋಲು-ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಮುಖ್ಯ ಎಂದು ನುಡಿದರು.
ಸಮನ್ವಯಾಧಿಕಾರಿ ಭಾಗ್ಯಾ ಮಾತನಾಡಿ, ಕ್ರೀಡೆಯಿಲ್ಲದ ವ್ಯಕ್ತಿ ಕೀಟವಿದ್ದಂತೆ. ಪ್ರತಿದಿನದ ಜಂಜಾಟದಲ್ಲಿ ಕ್ರೀಡೆ ಪ್ರತಿಯೊಬ್ಬರಿಗೂ ಬೇಕಿದೆ. ಶಿಕ್ಷಕರು ಪಠ್ಯದ ಜೊತೆಗೆ ಕ್ರೀಡೆಗೂ ಹೆಚ್ಚಿನ ಪ್ರೋತ್ಸಾಹವನ್ನು ನೀಡಬೇಕಿದೆ ಎಂದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೈ.ಬಿ. ಆನಂದಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರ ಸಂಘದ ರಾಜ್ಯ ಕಾರ್ಯದರ್ಶಿ ವೈ.ಸಿ. ಚಂದ್ರಪ್ಪ, ಜಿಲ್ಲಾ ಖಜಾಂಚಿ ಎಸ್. ಬಸವರಾಜು, ತಾಲೂಕು ನೌಕರರ ಸಂಘದ ಕಾರ್ಯದರ್ಶಿ ವೈ.ಎಂ. ತಿಪ್ಪೇಶ್, ಶಿಕ್ಷಕರ ಸಂಘದ ಕಾರ್ಯದರ್ಶಿ ಎ.ಪಿ. ಶ್ರೀನಿವಾಸ್, ಗೀತಾ, ಉಮಾಪತಿ, ಗಂಗಮ್ಮ, ಹರೀಶ್‌ಮತ್ತಿತರರು ಉಪಸ್ಥಿತರಿದ್ದರು.







