ತಮಗೆ ಸಡ್ಡು ಹೊಡೆದ ಅಜಯ್ ಗೆ ವಿಭಿನ್ನವಾಗಿ ತಿರುಗೇಟು ನೀಡಿದ ಕರಣ್

ಮುಂಬೈ, ಸೆ. 3 : ದೀಪಾವಳಿಗೆ ಬಿಡುಗಡೆಯಾಗಲಿರುವ ಬಾಲಿವುಡ್ ನ ಎರಡು ಮೆಗಾ ಚಿತ್ರಗಳು ಈಗಾಗಲೇ ಸಿಡಿಮದ್ದು ಪ್ರದರ್ಶನ ಪ್ರಾರಂಭಿಸಿವೆ ! ಅಜಯ್ ದೇವ್ಗನ್ ಅವರ ಮಹತ್ವಾಕಾಂಕ್ಷಿ ಚಿತ್ರ ಶಿವಾಯ್ ಹಾಗು ಕರಣ್ ಜೋಹರ್ ಅವರ ಬಹು ನಿರೀಕ್ಷಿತ ಅಯ್ ದಿಲ್ ಹೈ ಮುಷ್ಕಿಲ್ ಚಿತ್ರಗಳು ಈಗ ಈ ಇಬ್ಬರ ನಡುವೆ ' ಯುದ್ಧ ' ತಂದಿಟ್ಟಿವೆ.
ತಮ್ಮ ಚಿತ್ರದ ಬಗ್ಗೆ ಕೆಟ್ಟ ಅಭಿಪ್ರಾಯ ಟ್ವೀಟ್ ಮಾಡಲು ಬಾಲಿವುಡ್ ನ ಮಹಾ ತಲೆನೋವು ವ್ಯಕ್ತಿ ಕಮಲ್ ಆರ್ ಖಾನ್ ಅವರಿಗೆ ಕರಣ್ ಜೋಹರ್ ೨೫ ಲಕ್ಷ ಲಂಚ ಕೊಟ್ಟಿರುವ ಬಗ್ಗೆ ತನಿಖೆ ನಡೆಯಬೇಕಿದೆ ಎಂದು ಅಜಯ್ ದೇವ್ಗನ್ ಒಂದು ಆಡಿಯೋ ಬಿಡುಗಡೆ ಮಾಡಿದ್ದಾರೆ. ಇದು ಕರಣ್ ವಿರುದ್ಧ ಅಜಯ್ ಮಾಡಿರುವ ಗಂಭೀರ ಆರೋಪ .
ಈ ಹಿಂದೆಯೂ ಅಜಯ್ ರ ಸನ್ ಆಫ್ ಸರ್ದಾರ್ ಹಾಗು ಜೋಹರ್ ರ ಜಬ್ ತಕ್ ಹೈ ಜಾನ್ ಚಿತ್ರ ಒಟ್ಟಿಗೆ ಬಿಡುಗಡೆಯಾಗುವಾಗಲೂ ಜಟಾಪಟಿಯಾಗಿತ್ತು. ಆದರೆ ಈ ಬಾರಿ ಅದು ಹದ್ದು ಮೀರಿ ಗಂಭೀರ ರೂಪ ತಾಳಿದೆ. ಕಮಲ್ ಖಾನ್ ಈ ಆರೋಪವನ್ನು ತಳ್ಳಿ ಹಾಕಿದ್ದರೂ ಅಜಯ್ ಆರೋಪದಿಂದ ಹಿಂದೆ ಸರಿದಿಲ್ಲ. ಶನಿವಾರ ಕರಣ್ ಜೋಹರ್ ತಮ್ಮ ಮೇಲಿನ ಆರೋಪಕ್ಕೆ ಪ್ರತಿಕ್ರಿಯಿಸಿವುದು ತಮ್ಮ ಘನತೆಗೆ ತಕ್ಕುದಾದುದಲ್ಲ ಎಂದು ಹೇಳುವ ಮೂಲಕ ಅಜಯ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.





