ಕೃಷಿ ಉತ್ಪನ್ನ ಮಾರುಕಟ್ಟೆಗೆ ಡಿಸಿ ದಿಢೀರ್ ಭೇಟಿ
ಸ್ವಚ್ಛತೆಗೆ ಆದ್ಯತೆ ನೀಡಲು ಅಧಿಕಾರಿಗಳಿಗೆ ಸೂಚನೆ

ಚಿಕ್ಕಮಗಳೂರು, ಸೆ.3: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಜಿಲ್ಲಾಧಿಕಾರಿ ಜಿ. ಸತ್ಯವತಿ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾರುಕಟ್ಟೆಯಲ್ಲಿ ರೈತರಿಗೆ ಒದಗಿಸಲಾದ ಮೂಲಭೂತ ಸೌಕರ್ಯಗಳು, ಸ್ವಚ್ಛತೆ ಹಾಗೂ ಆಡಳಿತ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದ ಅವರು, ರೈತರಿಗೆ ಅನನುಕೂಲತೆ ಆಗದ ರೀತಿಯಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ರೈತರು ಮತ್ತು ಗ್ರಾಹಕರಿಗೆ ಹೆಚ್ಚಿನ ಲಾಭವಾಗುವ ರೀತಿ ಸಿಬ್ಬಂಧಿಗಳು ನಿಗಾವಹಿ ಸಬೇಕು. ಮಾರುಕಟ್ಟೆಯ ಪ್ರಾಂಗಣದಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದೆ ಎಂಬ ದೂರುಗಳಿವೆ. ಇದರಿಂದ ಇಲ್ಲಿನ ಸ್ವಚ್ಛತೆಗೂ ಸಮಸ್ಯೆ
ಯಾಗುತ್ತಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯ ಎರಡು ದ್ವಾರದಲ್ಲೂ ಕೌ ಗಾರ್ಡ್‌ಗಳನ್ನು ಅಳವಡಿಸುವಂತೆ ಸೂಚಿಸಿದರು. ಮಾರುಕಟ್ಟೆಯಲ್ಲಿ ಅಲ್ಲಲ್ಲಿ ಕೊಳೆತ ಟೊಮೆಟೊ ಇನ್ನಿತರ ತರಕಾರಿಗಳು ರಾಶಿ ಬಿದ್ದಿ ದ್ದನ್ನು ಗಮನಿಸಿದ ಅವರು, ಇನ್ನು ಮುಂದೆ ಈ ರೀತಿ ಆಗಲು ಅವಕಾಶ ನೀಡಬಾರದು. ತರಕಾರಿ ಕೊಳೆತು ದುರ್ನಾತ ಬೀರುತ್ತಿದೆ. ಇದು ರೈತರು ಹಾಗೂ ವ್ಯಾಪಾರಸ್ಥರಿಗೆ ತೊಂದರೆ ಉಂಟು ಮಾಡುತ್ತದೆ. ಸ್ವಚ್ಛತೆ ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಾರ್ಯದರ್ಶಿ ಚಂದ್ರಶೇಖರ್ ಅವರಿಗೆ ಆದೇಶಿಸಿದರು. ಇದೇ ವೇಳೆ ಟೊಮೆಟೊ ಹರಾಜು ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ಕೊಟ್ಟ ಜಿಲ್ಲಾಧಿಕಾರಿಗಳು ಹರಾಜು ಪ್ರಕ್ರಿಯೆಯನ್ನು ಖುದ್ದು ಪರಿಶೀಲಿಸಿ ಕಡಿಮೆ ಬೆಲೆಗೆ ವರ್ತಕರು ಬಿಡ್ ಅಂತಿಮಗೊಳಿಸಿದ್ದನ್ನು ಗಮನಿಸಿದ ಅವರು, ಇನ್ನಷ್ಟು ಹೆಚ್ಚು ಬೆಲೆಗೆ ಹರಾಜು ಕೂಗಿ ರೈತರಿಗೆ ಅನುಕೂಲ ಮಾಡಿಕೊಡಿ ಎಂದು ತಿಳಿಸಿದರು. ಇದೇ ವೇಳೆ ವೇ ಬ್ರಿಡ್ಜ್ ಪರಿಶೀಲಿಸಿದ ಜಿಲ್ಲಾಧಿಕಾರಿ ಅದಕ್ಕೆ ಅಡ್ಡಲಾಗಿ ಕಾಂಪೌಂಡ್ ನಿರ್ಮಿಸುವ ಅಗತ್ಯವೇನಿತ್ತು ಇದರಿಂದ ಸರಕಾರಕ್ಕೆ ಏನು ಲಾಭ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಡಿಸಿ ಬಳಿ ಅಳಲು ತೋಡಿಕೊಂಡ ರೈತರು ಈ ಹಿಂದೆ ವರ್ತಕರು ಜಮೀನಿನ ಬಳಿಗೆ ಆಗಮಿಸಿ ಟೊಮೆಟೊ ಸೇರಿದಂತೆ ಇತರ ಬೆಳೆಗಳನ್ನು ಖರೀದಿಸುತ್ತಿದ್ದರು. ಒಂದೆರಡು ವರ್ಷಗಳಿಂದ ಎಪಿಎಂಸಿಯಲ್ಲಿ ಹರಾಜು ಪ್ರಕ್ರಿಯೆ ಪ್ರಾರಂಭಗೊಂಡಿದ್ದರೂ ರೈತರಿಗೆ ಲಾಭವಾಗುತ್ತಿಲ್ಲ. ಬಿಡ್ ಕೂಗುವ ವರ್ತಕರೆಲ್ಲರೂ ಒಂದಾಗಿ ಒಂದು ಬೆಲೆ ನಿಗದಿ ಪಡಿಸಿಕೊಂಡು ಅಷ್ಟಕ್ಕೆ ಬಿಡ್ ಅಂತಿಮಗೊಳಿಸುತ್ತಿದ್ದಾರೆ. ಇದರಿಂದ ಗ್ರಾಹಕರು ಹಾಗೂ ರೈತರಿಬ್ಬರಿಗೂ ಅನ್ಯಾಯವಾಗುತ್ತಿದೆ ಎಂದು ದೂರಿದರು.







