ಸೌಲಭ್ಯ ವಂಚಿತರಿಗೆ ಉ.ಕ. ಜಿಲ್ಲಾಡಳಿತದ ನೆರವು
9,582 ಅರ್ಹ ಫಲಾನುಭವಿಗಳಿಗೆ ಸಹಾಯ ಹಸ್ತ

ಕಾರವಾರ, ಸೆ.3: ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯಲು ಅರ್ಹತೆ ಹೊಂದಿದ್ದರೂ, ಅರ್ಜಿ ಸಲ್ಲಿಸದೇ ಯೋಜನೆಯಿಂದ ವಂಚಿತರಾಗಿದ್ದ 9,582 ಫಲಾನುಭವಿಗಳನ್ನು ಸ್ವತಃ ಗುರುತಿಸಿ ಸೌಲಭ್ಯ ಒದಗಿಸುವ ಕಾರ್ಯವನ್ನು ಜಿಲ್ಲಾಡಳಿತ ಕೈಗೊಂಡಿದೆ.
ಸಾಮಾಜಿಕ ಭದ್ರತಾ ಯೋಜನೆಯಡಿ ಸಂಧ್ಯಾ ಸುರಕ್ಷಾ, ಅಂಗವಿಕಲರ ವೇತನ, ವೃದ್ಧಾಪ್ಯ ವೇತನ, ವಿಧವಾ ವೇತನ, ಮೈತ್ರಿ ಯೋಜನೆ, ಮನಸ್ವಿನಿ ಯೋಜನೆ ಅಡಿ ಫಲಾನುಭವಿಗಳಿಗೆ ಪಿಂಚಣಿಯ ಸೇವೆ ಒದಗಿಸಲಾಗುತ್ತಿದೆ. ಯೋಜನೆಯ ನೆರವು ಪಡೆಯಲು ಫಲಾನುಭವಿಗಳು ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕಾಗಿದೆ. ಆದರೆ ಹಲವಾರು ಕಾರಣಗಳಿಂದ ಸಾವಿರಾರು ಅರ್ಹ ವ್ಯಕ್ತಿಗಳು ಅರ್ಜಿ ಸಲ್ಲಿಸದೇ ಸೌಲಭ್ಯ ವಂಚಿತರಾಗಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿತ್ತು.
ಬೆಳಕಿಗೆ ಬಂದದ್ದು ಹೇಗೆ: ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಓವರ್ ದಿ ಕೌಂಟರ್ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ವಿತರಿಸುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಪಡಿತರ ಚೀಟಿಯಲ್ಲಿನ ಕುಟುಂಬವಾರು ಮಾಹಿತಿ ಪಡೆಯಲು ಕೈಪಿಡಿ ಮುದ್ರಿಸಲಾಗಿತ್ತು. ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಕೈಪಿಡಿ ಭರ್ತಿ ಮಾಡಿದ್ದರು. ಇದರಿಂದ ಪ್ರತಿ ಪಡಿತರ ಚೀಟಿಯಲ್ಲಿ ಹೆಸರಿರುವವರ ಆದಾಯ, ಜಾತಿ, ವಯಸ್ಸು ಹಾಗೂ ಇತರ ಮಾಹಿತಿಗಳು ಲಭ್ಯವಾಗಿದ್ದವು. ಈ ರೀತಿ ಗ್ರಾಮ ಲೆಕ್ಕಿಗರು ಮನೆ-ಮನೆಗೆ ಭೇಟಿ ನೀಡಿ ಸಂಗ್ರಹಿಸಿರುವ ಕೈಪಿಡಿಯ ಮಾಹಿತಿಯನ್ನಾಧರಿಸಿ, ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಈಗಾಗಲೇ ಪಿಂಚಣಿ ಪಡೆಯುತ್ತಿರುವವರ ಹಾಗೂ ನಿಯಮಾನುಸಾರ ವಿವಿಧ ಪಿಂಚಣಿ ಪಡೆಯಲು ಅರ್ಹರಿರುವ ಸಂಭಾವ್ಯ ಪಟ್ಟಿಯನ್ನು ಸಿದ್ಧಪಡಿಸಲಾಯಿತು. ಜಿಲ್ಲೆಯಲ್ಲಿ ಸಾಮಾಜಿಕ ಭದ್ರತೆಯ ಒಟ್ಟು 5ಯೋಜನೆಗಳಲ್ಲಿ ಇನ್ನೂ 9,582ಜನರು ಪಿಂಚಣಿ ಪಡೆಯುವ ಅರ್ಹತೆ ಹೊಂದಿರುವುದು ಇದರಿಂದ ಪತ್ತೆಯಾಗಿತ್ತು.
ಅರ್ಹ ವ್ಯಕ್ತಿಗಳಿಗೆ ತಿಳುವಳಿಕೆ ನೀಡಿ ಅವರಿಂದ ಅರ್ಜಿ ಹಾಕಿಸುವಂತೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದರಂತೆ ಜಿಲ್ಲೆಯಲ್ಲಿ ಅರ್ಹ ವ್ಯಕ್ತಿಗಳಿಂದ ವಿವಿಧ ಯೋಜನೆಗಳ ಅಡಿ ಅರ್ಜಿ ಹಾಕಿಸಿ, ತಹಶೀಲ್ದಾರ್‌ರಿಂದ ಪಿಂಚಣಿ ಮಂಜೂರು ಮಾಡಿಸಿ, ಅವರ ಮನೆಗೆ ಹೋಗಿ ಮಂಜೂರಾತಿ ಆದೇಶ ನೀಡುವ ಕಾರ್ಯವನ್ನು ಆ.1ರಿಂದ ರಿಂದ ಜಿಲ್ಲೆಯಾದ್ಯಂತ ನಡೆಸಲಾಗುತ್ತಿದೆ. ಕಳೆದ ಒಂದು ತಿಂಗಳಲ್ಲಿ 9,916 ಅರ್ಹ ವ್ಯಕ್ತಿಗಳ ಪೈಕಿ 7,263ಫಲಾನುಭವಿಗಳಿಂದ ಅರ್ಜಿಯನ್ನು ಬರೆಯಿಸಿ ಪಡೆದುಕೊಳ್ಳಲಾಗಿದೆ. ಸಂಧ್ಯಾ ಸುರಕ್ಷಾ ಯೋಜನೆಯಡಿ 4,791, ಅಂಗವಿಕಲರ ವೇತನದಡಿ 136, ವೃದ್ಧಾಪ್ಯ ವೇತನದಡಿ 4,368, ವಿಧವಾ ವೇತನದಡಿ 28, ಮನಸ್ವಿನಿ ಯೋಜನೆಯಡಿ 90 ಅರ್ಹ ಫಲಾನುಭವಿಗಳು ಬೆಳಕಿಗೆ ಬಂದಿದ್ದರು. ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ಸೌಲಭ್ಯವನ್ನು ಆದಷ್ಟು ಬೇಗನೆ ಒದಗಿಸುವಂತೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.
ಅನಕ್ಷರತೆ, ಮಾಹಿತಿ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಸರಕಾರದ ಸೌಲಭ್ಯಗಳು ಅರ್ಹರಿಗೆ ದೊರೆಯದಿರುವ ಸಾಧ್ಯತೆಗಳು ಇವೆ. ಇಂತಹ ಪರಿಸ್ಥಿತಿಯಲ್ಲಿ ಆಡಳಿತ ವ್ಯವಸ್ಥೆ ಜನರ ಬಳಿಗೆ ತೆರಳಿ ಸೌಲಭ್ಯವನ್ನು ತಲುಪಿಸುವ ಕಾರ್ಯ ಮಾಡುತ್ತಿರುವುದು ಅನುಕರಣೀಯ.
- ಕಾಗೋಡು ತಿಮ್ಮಪ್ಪ
ಕಂದಾಯ ಸಚಿವ







