ಅಂಬೇಡ್ಕರ್ ಭವನಕ್ಕೆ 1.5 ಕೋಟಿ ರೂ. ಮಂಜೂರಿಗೆ ಪ್ರಸ್ತಾವನೆ
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಸಮಿತಿ ಸಭೆ

ಸೋಮವಾರಪೇಟೆ, ಸೆ.3: ತಾಲೂಕು ಕೇಂದ್ರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಂಬೇಡ್ಕರ್ ಭವನಕ್ಕೆ ರೂ.1.5ಕೋಟಿ ಹಣ ಮಂಜೂರಾತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಹಶೀಲ್ದಾರ್ ಶಿವಪ್ಪ ತಿಳಿಸಿದರು.
ಇಲ್ಲಿನ ತಾಲೂಕು ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ರೂ.1ಕೋಟಿಗೆ ಹಣ ಮಂಜೂರಾತಿಗಾಗಿ ಸಮಾಜ ಕಲ್ಯಾಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ತಾಲೂಕು ಕೇಂದ್ರಗಳಲ್ಲಿ ಭವನ ನಿಮಾರ್ಣಕ್ಕೆ ರೂ.1.5ಕೋಟಿ ಹಣವನ್ನು ರಾಜ್ಯ ಸರಕಾರ ನೀಡುತ್ತಿದ್ದು, ಪರಿಷ್ಕೃತ ಅಂದಾಜು ಪಟ್ಟಿಯೊಂದಿಗೆ ಸಲ್ಲಿಸುವಂತೆ ಸಚಿವ ಎಚ್.ಆಂಜನೇಯ ಅವರು ಸೂಚಿಸಿದ ಹಿನ್ನೆಲೆಯಲ್ಲಿ ಶಾಸಕರ ಪತ್ರದೊಂದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಜಿಪಂ ಮಾಜಿ ಅಧ್ಯಕ್ಷೆ ಎಚ್.ಬಿ.ಜಯಮ್ಮ ಮಾತನಾಡಿ, ತಾಲೂಕಿನ ಎಲ್ಲ ಗ್ರಾಪಂ ಹಾಗೂ ಪಪಂ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಸ್ಮಶಾನಕ್ಕಾಗಿ ಸ್ಥಳ ಮೀಸಲಿರುಸುವಂತೆ ಸರಕಾರ ಆದೇಶ ನೀಡಿದ್ದರೂ ಈವರೆಗೂ ಯಾವುದೇ ಕ್ರಮ ಜರಗಿಸಿಲ್ಲ, ಕಳೆದ ಮೂರು ವರ್ಷಗಳಲ್ಲಿ ಐವರು ತಹಶೀಲ್ದಾರ್‌ಗಳು ಅಧಿಕಾರಕ್ಕೆ ಬಂದು ಹೋದರೂ ಸ್ಮಶಾನ ಜಾಗದ ಸಮಸ್ಯೆ ಪರಿಹಾರವಾಗಿಲ್ಲ ಆರೋಪಿಸಿದರು. ಈಗಾಗಲೇ ತಾಲೂಕಿನಾದ್ಯಂತ ಸ್ಮಶಾನಕ್ಕೆ ಸ್ಥಳ ಗುರುತಿಸಲಾಗಿದೆ. ಸದ್ಯದಲ್ಲೇ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ತಹಶೀಲ್ದಾರ್ ಶಿವಪ್ಪ ಸಭೆಗೆ ತಿಳಿಸಿದರು.
ಈ ಸಂದರ್ಭ ಮಾತನಾಡಿದ ವಕೀಲ ಬಿ.ಈ.ಜಯೇಂದ್ರ, ಕಳೆದ ಮೂರು ವರ್ಷಗಳಿಂದ ಇದೇ ಹೇಳಿಕೆಯನ್ನು ತಹಶೀಲ್ದಾರ್‌ಗಳು ನೀಡುತ್ತಾ ಬಂದಿದ್ದಾರೆ. ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ ಎಂದು ದೂರಿದರು. ಈ ವಿಚಾರಕ್ಕೆ ಧ್ವನಿ ಗೂಡಿಸಿದ ಸಮಿತಿ ಸದಸ್ಯ ರಾಜಪ್ಪ, ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಮಾತಿಗೆ ಯಾವುದೇ ಕಿಮ್ಮತ್ತಿಲ್ಲ. ಸಿಬ್ಬಂದಿ ಅವರಿಗೆ ಇಷ್ಟ ಬಂದಂತೆ ಕೆಲಸ ಮಾಡುತ್ತಿದ್ದಾರೆ, ಇನ್ನಾದರೂ ತಾಲೂಕು ದಂಡಾಧಿಕಾರಿಗಳು ಸಿಬ್ಬಂದಿಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಸಮಿತಿ ಸದಸ್ಯ ಡಿ.ಎಸ್.ನಿರ್ವಾಣಪ್ಪ ಮಾತನಾಡಿ, ಕಳೆದ ವರ್ಷ ಎಪ್ರಿಲ್‌ನಲ್ಲಿ ಮೃತಪಟ್ಟ ದಲಿತ ವಿದ್ಯಾರ್ಥಿ ಸ್ವೀಕಾರ್ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಆದರೆ ಕಳೆದ ವಾರ ಕುಶಾಲನಗರದಲ್ಲಿ ಮೃತಪಟ್ಟ ಆಟೊ ಚಾಲಕ ಪ್ರವೀಣ್ ಪೂಜಾರಿ ಪ್ರಕರಣವನ್ನು ಪೊಲೀಸರು ವಿಶೇಷ ಆಸಕ್ತಿಯಿಂದ ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಇದು ಪೊಲೀಸ್ ಇಲಾಖೆಯ ದಲಿತ ವಿರೋಧಿ ನೀತಿಯನ್ನು ಬಿಂಬಿಸುತ್ತಿದೆ ಎಂದು ಸೋಮವಾರಪೇಟೆ ವೃತ್ತ ನಿರೀಕ್ಷಕ ಪರಶಿವಮೂರ್ತಿಯವರನ್ನು ತರಾಟೆಗೆ ತೆಗೆದುಕೊಂಡರು. ನಿವೇಶನ ರಹಿತರಿಗೆ ವಿತರಿಸಲು ಬಾಕಿ ಉಳಿದಿರುವ 21 ನಿವೇಶನಗಳ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸೂಕ್ತ ಮಾಹಿತಿಯನ್ನು ಪಪಂ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸದೇ ಇರುವುದಕ್ಕೆ ಮುಖ್ಯಾಧಿಕಾರಿ ನಾಚಪ್ಪ ಅವರನ್ನು ಸಮಿತಿ ಸದಸ್ಯರು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿಗಳು, ನಿವೇಶನ ಪ್ರಕ್ರಿಯೆಯನ್ನು ಸೂಚನಾ ಫಲಕದಲ್ಲಿ ಪ್ರಕಟಿಸಿ ಪಾರದರ್ಶಕವಾಗಿ ವಿತರಿಸಲು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.
ಪರಿಶಿಷ್ಟ ಜಾತಿ, ಪಂಗಡದವರಿಗೆ ಜಾತಿ ದೃಢೀಕರಣ ಪತ್ರ ನೀಡುವಲ್ಲಿ ಲಂಚ ಕೇಳುತ್ತಿದ್ದಾರೆ. ಇದರಿಂದ ಸರಕಾರದ ಯೋಜನೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ದೊಡ್ಡಮಳೆ ಗ್ರಾಪಂ ಸದಸ್ಯೆ ಸೋಮಕ್ಕ ತಹಶೀಲ್ದಾರ ಅವರಿಗೆ ಮನವಿ ಮಾಡಿದಾಗ, ಕಳೆದ 2 ವರ್ಷಗಳಿಂದ ದೊಡ್ಡಮಳ್ತೆ ಪಂಚಾಯತ್ ವ್ಯಾಪ್ತಿಯ ಇಬ್ಬರು ನಿವಾಸಿಗಳಿಗೆ ಜಾತಿ ದೃಢೀಕರಣ ಪತ್ರ ನೀಡದಿರುವ ಕುರಿತು ವರದಿಯಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಮುಂದಿನ 24 ಗಂಟೆಯೊಳಗಾಗಿ ಇಬ್ಬರಿಗೆ ಜಾತಿ ದೃಢೀಕರಣ ಪತ್ರ ನೀಡಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ಪಿ.ಚಂದ್ರಶೇಖರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಮೇಗೌಡ, ಕೃಷಿ ಇಲಾಖೆ ಅಧಿಕಾರಿ ಡಾ.ರಾಜಶೇಖರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.







