ಭಾಗ್ಯವಾಣಿ : ಅಭಿವೃದ್ಧಿ ಯೋಜನೆಗಳೊಂದಿಗೆ ಅರ್ಥಪೂರ್ಣ ಪಯಣ
ಮಂಗಳೂರು, ಸೆ.3:ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳ ಮಾಹಿತಿಯನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಪ್ರಯತ್ನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವಿನೂತನ ಕಾರ್ಯಕ್ರಮ ಭಾಗ್ಯವಾಣಿ-ಅಭಿವೃದ್ಧಿ ಯೋಜನೆಗಳೊಂದಿಗೆ ಅರ್ಥಪೂರ್ಣ ಪಯಣ ರೂಪಿಸಿದೆ. ಸೆ. 4 ರಿಂದ ಆಕಾಶವಾಣಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಆಕಾಶವಾಣಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಆಕಾಶವಾಣಿಯಲ್ಲಿ ಈಗಾಗಲೇ ಜನಪ್ರಿಯವಾಗಿರುವ ಹಟ್ಟಿ-ಹರಟೆ ಮಾದರಿಯಲ್ಲಿ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದ್ದು, ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಗ್ರಾಮೀಣ ಜನರ ಆಡುನುಡಿಯಲ್ಲಿ ಯೋಜನೆಗಳ ಮಾಹಿತಿ ನೀಡುವ ಪ್ರಯತ್ನ ಮಾಡಲಾಗಿದೆ. ವಿವಿಧ ಇಲಾಖೆ ಅಧಿಕಾರಿಗಳು ಯೋಜನೆ ಮಾಹಿತಿ ನೀಡುವುದರ ಜೊತೆಗೆ ಯೋಜನೆಗಳ ಫಲಾನುಭವಿಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲಿದ್ದಾರೆ. ಸುಶ್ರಾವ್ಯ ಹಾಡುಗಳೊಂದಿಗೆ ಯೋಜನೆಗಳ ಕುರಿತು ಸಂವಾದ ಕೂಡ ನಡೆಯಲಿದೆ. 13 ಸರಣಿಗಳುಳ್ಳ ಈ ಭಾಗ್ಯವಾಣಿ ಸೆ.4 ರಿಂದ ನ. 27 ರವರೆಗೆ ಪ್ರತಿ ಭಾನುವಾರ ರಾತ್ರಿ 7 ರಿಂದ 7-30 ಗಂಟೆಯವರೆಗೆ ರಾಜ್ಯದ 13 ಆಕಾಶವಾಣಿ ಕೇಂದ್ರಗಳ ಮೂಲಕ ರಾಜ್ಯಾದ್ಯಂತ ಪ್ರಸಾರವಾಗಲಿದೆ. ಈ ಕಾರ್ಯಕ್ರಮವನ್ನು ಮೈಸೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಎನ್. ಕೇಶವ ಮೂರ್ತಿ ಅವರು ನಿರ್ಮಿಸಿದ್ದಾರೆ.
ಸೆ.4 ರಂದು ಅನ್ನಭಾಗ್ಯ ಯೋಜನೆ, ಸೆ.11 ರಂದು ಕೃಷಿಭಾಗ್ಯ ಯೋಜನೆ, ಸೆ. 18 ರಂದು ಮನಸ್ವಿನಿ ಮತ್ತು ಮೈತ್ರಿ ಯೋಜನೆ-ನೊಂದವರಿಗೆ ಸಾಂತ್ವನ, ಸೆ. 25 ರಂದು ಋಣಮುಕ್ತ - ಹೊಸ ಬದುಕಿನ ಆಶಯಕ್ಕೆ ಮುನ್ನಡಿ, ಅ. 2 ರಂದು ಕ್ಷೀರಾಧಾರೆ-ಹೈನುಗಾರಿಕೆಗೆ ಉತ್ತೇಜನ, ಅ. 9 ರಂದು ವಿದ್ಯಾಸಿರಿ-ಓದುವ ಕನಸಿಗೆ ನೆರವು, ಅ.16 ರಂದು ಕ್ಷೀರಭಾಗ್ಯ-ಪೌಷ್ಠಕ ಮಕ್ಕಳು, ಅ.23 ರಂದು ತಳ ಸಮುದಾಯ ಏಳಿಗೆ-ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನರಿಗಾಗಿ ನೆರವು, ಅ.30 ರಂದು ಸ್ವಚ್ಫ ಭಾರತ್ ಮಿಷನ್-ನಿರ್ಮಲ ಭಾರತ್ ಅಭಿಯಾನ, ನ. 6 ರಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ನರೇಗಾ, ಕುಡಿಯುವ ನೀರು, ಎನ್.ಆರ್.ಎಲ್.ಎಂ., ನ. 13 ರಂದು ಜಲ ಸಂಪನ್ಮೂಲ ಹಾಗೂ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಯೋಜನೆಗಳು, ನ.20 ರಂದು ಇಂಧನ, ಸೌರ ವಿದ್ಯುತ್, ನಗರ ಜ್ಯೋತಿ, ಜೈವಿಕ ಇಂಧನ, ಭಾಗ್ಯಜ್ಯೋತಿ ಮತ್ತು ನ. 27 ರಂದು ನಗರಾಭಿವೃದ್ಧಿ-ನಗರ ಬಡತನ ನಿರ್ಮೂಲನ ಹಾಗೂ ನಮ್ಮ ಮೆಟ್ರೋ ಕಾರ್ಯಕ್ರಮ ನಡೆಯಲಿದೆ.
ಸರ್ಕಾರ ಸಾಮಾನ್ಯ ಹಾಗೂ ಬಡ ಜನರಿಗೆ ಹಲವಾರು ಅಭಿವೃದ್ಧಿ ಕಾರ್ಯಕ್ರಮವನ್ನು ರೂಪಿಸುತ್ತಿದೆ. ಈ ಯೋಜನೆಗಳನ್ನು ಪರಿಣಾಮಕಾರಿಯಾಗಿ ತಿಳಿಸುವುದೇ ಭಾಗ್ಯವಾಣಿ ಸರಣಿಯ ಮುಖ್ಯ ಆಶಯವಾಗಿದೆ. ಈ ಕಾರ್ಯಕ್ರಮ ಅರ್ಧ ಗಂಟೆ ಅವಧಿಯದಾಗಿದ್ದು, ಅಕಾಶವಾಣಿ ಮೂಲಕ ಪ್ರಸಾರವಾಗುವ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಪಡೆದು ಸದುಪಯೋಗ ಪಡಿಸಿಕೊಳ್ಳುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್ ವಿಶುಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







