ಐತಿಹಾಸಿಕ ಜಯ ಗಳಿಸಿದ ಭಾರತದ ಫುಟ್ಬಾಲ್ ತಂಡ
ಸೌಹಾರ್ದ ಫುಟ್ಬಾಲ್ ಪಂದ್ಯ

ಮುಂಬೈ, ಸೆ.3: ಗುರುಪ್ರೀತ್ ಸಿಂಗ್ ನೇತೃತ್ವದ ಭಾರತದ ಪುಟ್ಬಾಲ್ ತಂಡ ತನಗಿಂತ ಅಗ್ರ ರ್ಯಾಂಕಿನ ಪೊರ್ಟೊ ರಿಕೊ ವಿರುದ್ಧ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ.
ಶನಿವಾರ ಇಲ್ಲಿನ ಅಂಧೇರಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಪರ ನಾರಾಯಣ್ ದಾಸ್(18ನೆ ನಿಮಿಷ), ಸುನೀಲ್ ಚೆಟ್ರಿ(26ನೆ ನಿಮಿಷ), ಜೆಜೆ ಲಾಲ್‌ಪೆಕುಲ್ವಾ(34ನೆ ನಿಮಿಷ)ಹಾಗೂ ಜಾಕಿಚಂದ್(58ನೆ ನಿ.) ತಲಾ ಒಂದು ಗೋಲು ಬಾರಿಸಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು.
8ನೆ ನಿಮಿಷದಲ್ಲಿ ಗೋಲು ಬಾರಿಸಿದ ಪೋರ್ಟೊ ರಿಕೊದ ಸಾಂಜೆಝ್ 1-0 ಮುನ್ನಡೆ ಒದಗಿಸಿಕೊಟ್ಟರು. 18ನೆ ನಿಮಿಷದಲ್ಲಿ ಚೆಟ್ರಿ ನೆರವಿನಿಂದ ಗೋಲು ಬಾರಿಸಿದ ನಾರಾಯಣ್ ಸ್ಕೋರನ್ನು 1-1 ರಿಂದ ಸಮಬಲಗೊಳಿಸಿದರು. ಮೊದಲಾರ್ಧದಲ್ಲಿ ಭಾರತ 3-1 ಮುನ್ನಡೆ ಸಾಧಿಸಿ ಸುಸ್ಥಿತಿಯಲ್ಲಿತ್ತು.
ದ್ವಿತೀಯಾರ್ಧದ 58ನೆ ನಿಮಿಷದಲ್ಲಿ ಗೋಲು ಬಾರಿಸಿದ ಜಾಕಿಚಂದ್ ಭಾರತಕ್ಕೆ 4-1 ಅಂತರದ ಗೆಲುವು ತಂದುಕೊಟ್ಟರು.
ಸುಮಾರು ಆರು ದಶಕಗಳ ಬಳಿಕ ಮುಂಬೈನಲ್ಲಿ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯ ನಡೆದಿದೆ.





