ಬೆಳಕಿನ ಕಿರಣವೊಂದರಿಂದ ಹೊಟ್ಟೆಯಲ್ಲಿದ್ದ ಗಡ್ಡೆ ಗುಣಮುಖ!
ತೆರೇಸಾರ ಮೊದಲ ಪವಾಡ
ಕೋಲ್ಕತಾ, ಸೆ.3: ವೆಟಿಕನ್ ನಗರದಲ್ಲಿ ರವಿವಾರ, ಮದರ್ ತೆರೇಸಾರಿಗೆ ಸಂತ ಪದವಿ ಪ್ರಧಾನ ಸಿದ್ಧತೆ ನಡೆಯುತ್ತಿದ್ದ ಸಂದರ್ಭದಲ್ಲಿ, ಅವರ ಮೊದಲ ಪವಾಡದಿಂದ ಗುಣಮುಖಳಾಗಿದ್ದಳೆನ್ನಲಾದ ಮಹಿಳೆಯೊಬ್ಬಳು ಬೆಂಗಾಲ್‌ನ ಆಕೆಯ ಗ್ರಾಮದ ಸಮೀಪದ ಚರ್ಚೊಂದರಲ್ಲಿ ಪ್ರಾರ್ಥನೆ ನಡೆಸುತ್ತಿದ್ದಳು.
ಕೋಲ್ಕತಾಕ್ಕೆ 400 ಕಿ.ಮೀ. ದೂರದ ಗ್ರಾಮವೊಂದರ ಬುಡಕಟ್ಟಿಗೆ ಸೇರಿರುವ ಮೋನಿಕಾ ಬೆಸ್ರಾ ಎಂಬ ಆ ಬಡ ಮಹಿಳೆ, 1998ರಲ್ಲಿ ಮದರ್ ತೆರೇಸಾರ ಭಾವಚಿತ್ರವೊಂದರಿಂದ ಹೊರ ಹೊಮ್ಮಿದ ಬೆಳಕಿನ ಕಿರಣವೊಂದು ತಾಗಿದ ಬಳಿಕ ತನ್ನ ಹೊಟ್ಟೆಯಲ್ಲಿದ್ದ ಭಾರೀ ದೊಡ್ಡ ಗಡ್ಡೆ ಗುಣವಾಗಿದೆಯೆಂದು ಪ್ರತಿಪಾದಿಸಿದ್ದಾಳೆ.
ತಾನು ಚರ್ಚ್ ಪ್ರವೇಶಿಸಿದೊಡನೆ ಬೆಳಕಿನ ಕಿರಣವೊಂದು ತನಗೆ ತಾಗಿತ್ತು. ತಾನು ದಿಗ್ಭಾಂತ್ರಳಾದೆ ಹಾಗೂ ನಡುಗುತ್ತ ಕಣ್ಣನ್ನು ಮುಚ್ಚಿಕೊಂಡಿದ್ದೆನೆಂದು ಮೋನಿಕಾ ದಕ್ಷಿಣ ದಿನಾಜ್‌ಪುರದ ತನ್ನ ಗ್ರಾಮದಲ್ಲಿ ಎನ್‌ಡಿಟಿವಿಯೊಂದಿಗೆ ಈ ಕತೆಯನ್ನು ಹಂಚಿಕೊಂಡಿದ್ದಾಳೆ.
2003ರಲ್ಲಿ ಆಕೆ ಪೋಪ್ 2ನೆ ಜಾನ್ ಪಾಲ್‌ರನ್ನು ರೋಮ್‌ನಲ್ಲಿ ಭೇಟಿಯಾಗಿದ್ದಳು. ಮೋನಿಕಾಳ ಪ್ರತಿಪಾದನೆಯನ್ನು ವೆಟಿಕನ್ ಪರಿಶೀಲಿಸಿತು ಹಾಗೂ ಅದು ತೆರೇಸಾರಿಗೆ ಪುನೀತೆಯ ಪದವಿ ದೊರೆಯಲು ಕಾರಣ ವಾಯಿತು. ಆಗ ಅವರು ಸಂತ ಪದವಿಗೆ ಒಂದು ಹೆಜ್ಜೆ ಹತ್ತಿರ ಬಂದಿದ್ದರು.
ಮದರ್ ತೆರೇಸಾ ತನಗೆ ದೇವರಿದ್ದಂತೆ. ಅವರು ತನಗೆ ಅನಾರೋಗ್ಯದಿಂದ ಮುಕ್ತಿ ಹೊಂದಲು ಸಹಾಯ ಮಾಡಿದ್ದಾರೆ. ಅವರನ್ನು ತಾನು ಸದಾ ನೆನಪಿಸುತ್ತಿದ್ದೇನೆಂದು ಮೋನಿಕಾ ಹೇಳಿದ್ದಾರೆ.





