ಐಎಎಸ್ ತುರ್ತು ಸುಧಾರಣೆ ಅಗತ್ಯ: ವರದಿ
ವಾಶಿಂಗ್ಟನ್, ಸೆ.3: ರಾಜಕೀಯ ಹಸ್ತಕ್ಷೇಪ ಹಾಗೂ ಕಾಲಬಾಧಿತ ಸಿಬ್ಬಂದಿ ಪ್ರಕ್ರಿಯೆಗಳಿಂದ ಹದಗೆಟ್ಟಿರುವ ಭಾರತೀಯ ಆಡಳಿತ ಸೇವೆಗೆ (ಐಎಎಸ್) ತುರ್ತು ಸುಧಾರಣೆಯ ಅಗತ್ಯವಿದೆಯೆಂದು ಅಮೆರಿಕದ ಉನ್ನತ ಚಿಂತಕರ ತಂಡವೊಂದು ಅಭಿಪ್ರಾಯಿಸಿದೆ.
ದುರದೃಷ್ಟವಶಾತ್, ಐಎಎಸ್ ರಾಜಕೀಯ ಹಸ್ತಕ್ಷೇಪ, ಕಾಲಬಾಧಿತ ಸಿಬ್ಬಂದಿ ಪ್ರಕ್ರಿಯೆಗಳು ಹಾಗೂ ನೀತಿ ಅನುಷ್ಠಾನದಲ್ಲಿ ಕಳಪೆ ಸಾಧನೆ ಮಾಡಿದೆ. ಅದಕ್ಕೆ ತುರ್ತು ಸುಧಾರಣೆಯ ಅಗತ್ಯವಿದೆಯೆಂದು ಕಾರ್ನೆಗಿ ಎಂಡೋಮೆಂಟ್ ಫಾರ್ ಇಂಟರ್ನ್ಯಾಶನಲ್ ಪೀಸ್, ನಿನ್ನೆ ಬಿಡುಗಡೆ ಮಾಡಿರುವ ‘ದಿ ಇಂಡಿಯನ್ ಅಡ್ಮಿನಿಸ್ಟ್ರೇಶನ್ ಸರ್ವೀಸ್ ಮೀಟ್ಸ್ ಬಿಗ್ ಡೇಟಾ’ ಕುರಿತಾದ ವರದಿಯಲ್ಲಿ ಹೇಳಿದೆ.
ಭಾರತ ಸರಕಾರವು ನೇಮಕಾತಿ ಹಾಗೂ ಭಡ್ತಿ ಪ್ರಕ್ರಿಯೆಗಳನ್ನು ಮರು ವಿನ್ಯಾಸಿಸಬೇಕು, ಪ್ರತಿ ಅಧಿಕಾರಿಯ ಸಾಧನೆಯಾಧಾರಿತ ವೌಲ್ಯಮಾಪನವನ್ನು ಸುಧಾರಿಸಬೇಕು, ಅಧಿಕಾರಿಗಳನ್ನು ರಾಜಕೀಯ ಹಸ್ತಕ್ಷೇಪದಿಂದ ರಕ್ಷಿಸಿ, ಹೊಣೆಗಾರಿಕೆಗೆ ಉತ್ತೇಜನ ನೀಡುವ ರಕ್ಷಣೆಯನ್ನು ಅಳವಡಿಸಬೇಕೆಂದು ವೈಷ್ಣವ್ ಹಾಗೂ ಸಕ್ಷಮ್ ಖೋಸ್ಲಾ ಬರೆದಿರುವ ವರದಿ ತಿಳಿಸಿದೆ. ರಾಜಕೀಯ ಹಸ್ತಕ್ಷೇಪದಿಂದ ಭಾರೀ ಪ್ರಮಾಣದ ಅದಕ್ಷತೆ ಸೃಷ್ಟಿಯಾಗುತ್ತದೆ.
ಅತ್ಯುತ್ತಮ ಅಧಿಕಾರಿಗಳಿಗೆ ಯಾವಾಗಲು ಪ್ರಮುಖ ಹುದ್ದೆಗಳು ದೊರೆಯುವುದಿಲ್ಲ. ರಾಜಕೀಯ ನಿಷ್ಠೆಯು ಅಧಿ ಕಾರಿಗಳಿಗೆ ವೃತ್ತಿ ಯಶಸ್ಸಿಗೆ ಪರ್ಯಾಯ ಮಾರ್ಗ ಒದಗಿಸು ತ್ತದೆಂದು ಕಾರ್ನೆಜಿ ತನ್ನ 50 ಪುಟಗಳ ವರದಿಯಲ್ಲಿ ಹೇಳಿದೆ.
ಹೆಚ್ಚು ರಾಜಕೀಯ ಮೇಲಾಟದಿಂದ ಉತ್ತಮ ಅಧಿಕಾರ ಶಾಹಿ ಸಾಧನೆ ಸಾಧ್ಯವಾಗುವುದಿಲ್ಲವೆಂದು ಅದು ತಿಳಿಸಿದೆ. ಪ್ರತಿ ಅಧಿಕಾರಿಯೂ ಕಣ್ಣಿಗೆ ಕಾಣುವ ಆರೋಗ್ಯ, ಶಿಕ್ಷಣ ಹಾಗೂ ಬಡತನದ ಫಲಿತಾಂಶಗಳ ಮೇಲೆ ಪ್ರಬಲ, ನೇರ ಹಾಗೂ ಅಳೆಯಬಹುದಾದ ಪ್ರಭಾವವನ್ನು ಬೀರಲು ಸಾಧ್ಯವಿದೆ. ಆದರೆ, ಆಶ್ಚರ್ಯವೆಂದರೆ, ಪ್ರಬಲ ಸ್ಥಳೀಯ ಸಂಬಂಧವಿರುವ ಅಧಿಕಾರಿಗಳು, ಭ್ರಷ್ಟಾಚಾರಕ್ಕೆ ಒಳಗಾಗುವ ಸಂಭವವಿದ್ದರೂ, ಹಲವು ಸಲ, ಸುಧಾರಿತ ಸಾರ್ವಜನಿಕ ಸೇವೆ ಒದಗಣೆಯೊಂದಿಗೆ ಸಂಬಂಧಪಡೆದಿರುತ್ತಾರೆಂದು ವರದಿ ಹೇಳಿದೆ.





