ಇಡಿಯಿಂದ ವಿಜಯ ಮಲ್ಯರ 6,630 ಕೋ.ರೂ.ಆಸ್ತಿ ಜಪ್ತಿ
ಮುಂಬೈ,ಸೆ.3: ಮಾಜಿ ಹೆಂಡದ ದೊರೆ ವಿಜಯ ಮಲ್ಯ ವಿರುದ್ಧದ ಅಕ್ರಮ ಹಣ ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ಸೇರಿದ 6,630 ಕೋ.ರೂ. ವೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ(ಇಡಿ)ವು ಶನಿವಾರ ಸ್ವಾಧೀನ ಪಡಿಸಿಕೊಂಡಿದೆ. ಇದು ಮಲ್ಯ ವಿರುದ್ಧ ಇಂತಹ ಎರಡನೇ ಕ್ರಮವಾಗಿದೆ.
ಮುಂಬೈ ಬಳಿಯ ತೋಟದ ಮನೆ, ಬೆಂಗಳೂರಿ ನಲ್ಲಿಯ ನಿವಾಸಗಳು, ಶೇರುಗಳು ಮತ್ತು ನಿರಖು ಠೇವಣಿಗಳು ವಶಪಡಿಕೊಂಡಿರುವ ಆಸ್ತಿಗಳಲ್ಲಿ ಸೇರಿವೆ ಎಂದು ಇಡಿಯ ಅಧಿಕಾರಿಯೋರ್ವರು ತಿಳಿಸಿದರು.
ಬ್ಯಾಂಕುಗಳಿಗೆ 9,000 ಕೋ.ರೂ.ಗೂ ಅಧಿಕ ಸಾಲದ ಹಣವನ್ನು ಪಂಗನಾಮ ಹಾಕಿ ದೇಶವನ್ನು ತೊರೆದಿರುವ ಮಲ್ಯ ವಿರುದ್ಧದ ಅಕ್ರಮ ಹಣ ವಹಿವಾಟು ಪ್ರಕರಣದ ತನಿಖೆಯನ್ನು ಇಡಿ ನಡೆಸುತ್ತಿದೆ. ಈಗ ನಿಷ್ಕ್ರಿಯಗೊಂಡಿರುವ ತನ್ನ ಒಡೆತನದ ಕಿಂಗ್ ಫಿಷರ್ ಏರ್‌ಲೈನ್ಸ್ ಹೆಸರಿನಲ್ಲಿ ಪಡೆದಿದ್ದ 950 ಕೋ.ರೂ ಸಾಲದಲ್ಲಿ ಅರ್ಧದಷ್ಟನ್ನು ವಿದೇಶದಲ್ಲಿ ಆಸ್ತಿ ಖರೀದಿಗಾಗಿ ಸಾಗಿಸಿದ್ದ ಆರೋಪವನ್ನು ಮಲ್ಯ ಹೊತ್ತಿದ್ದಾರೆ.
ಮಲ್ಯ ಮತ್ತು ಕಿಂಗ್‌ಫಿಷರ್ ವಿರುದ್ಧ ಹೊಸದಾಗಿ ದಾಖಲಾಗಿರುವ ಪ್ರಕರಣದ ಆಧಾರದಲ್ಲಿ ಈ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ ಮತ್ತು ಅವುಗಳ ವೌಲ್ಯಮಾಪನ 2010ರಲ್ಲಿದ್ದ ಅವುಗಳ ವೌಲ್ಯವನ್ನು ಆಧರಿಸಿದೆ ಎಂದು ಇಡಿ ಅಧಿಕಾರಿಯೋರ್ವರು ತಿಳಿಸಿದರು. ವಶಪಡಿಸಿಕೊಳ್ಳಲಾಗಿರುವ ಆಸ್ತಿಗಳಲ್ಲಿ ಷೇರುಗಳು ಸಿಂಹಪಾಲು(5,800 ಕೋ.ರೂ.) ಹೊಂದಿವೆ ಎಂದರು. ಇಡಿ ಈ ಹಿಂದೆ ಮಲ್ಯ ಅವರು ನೇರವಾಗಿ ಅಥವಾ ಪರೋಕ್ಷವಾಗಿ ಹೊಂದಿದ್ದ 1,400 ಕೋ.ರೂ.ವೌಲ್ಯದ ಆಸ್ತಿಗಳನ್ನು ವಶಪಡಿಸಿಕೊಂಡಿತ್ತು.







