ಆಮ್ನೆಸ್ಟಿ ಪ್ರಕರಣದಲ್ಲಿ ಎಬಿವಿಪಿಯದು ಅನಗತ್ಯ ಗೊಂದಲ: ದೊರೆಸ್ವಾಮಿ
ಬೆಂಗಳೂರು, ಸೆ.3: ಆಮ್ನೆಸ್ಟಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ್ದಾರೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಎಬಿವಿಪಿ ಅನಗತ್ಯವಾಗಿ ಸಮಸ್ಯೆಯನ್ನು ಸೃಷ್ಟಿಸಿದ್ದು, ಬಿಜೆಪಿ ಇದಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಆರೋಪಿಸಿದ್ದಾರೆ.
ನಗರದಲ್ಲಿಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಮ್ನೆಸ್ಟಿ ಆಯೋಜಿಸಿದ್ದ ಚರ್ಚಾ ಕಾರ್ಯಕ್ರಮದಲ್ಲಿ ಸೇನೆಯ ವಿರುದ್ಧ ಯಾವುದೇ ಘೋಷಣೆಗಳು ಕೂಗಿಲ್ಲ ಎನ್ನುವುದು ಸಂಸ್ಥೆ ನೀಡಿರುವ ವೀಡಿಯೊಗಳನ್ನು ನೋಡಿದರೆ ಅರ್ಥವಾಗುತ್ತದೆ. ಆದರೂ, ಎಬಿವಿಪಿ ಮತ್ತು ಬಿಜೆಪಿ ಆಧಾರ ರಹಿತವಾದದ್ದನ್ನು ಮುಂದಿಟ್ಟುಕೊಂಡು ನಗರದಲ್ಲಿ ಪ್ರತಿಭಟನೆ ನಡೆಸಿದೆ. ಹಾಗೂ ಪೊಲೀಸರು ಈ ಕುರಿತು ಎಫ್‌ಐಆರ್ ದಾಖಲು ಮಾಡಿದರೂ ವ್ಯರ್ಥ ಎಂದರು.
ಇತ್ತೀಚಿನ ದಿನಗಳಲ್ಲಿ ರಾಜದ್ರೋಹದ ವಿಷಯವನ್ನು ಜನರ ಸ್ವಾತಂತ್ರ ಹಕ್ಕನ್ನು ಕಿತ್ತುಕೊಳ್ಳುವ ಅಸತ್ತವನ್ನಾಗಿ ಬಳಸಿಕೊಳ್ಳಲಾಗುತ್ತಿದೆ ಎಂದ ಅವರು, ಭಾರತೀಯ ದಂಡ ಸಂಹಿತೆಯಲ್ಲಿರುವ 124(ಎ) ರಾಜದ್ರೋಹದ ಪ್ರಕರಣವನ್ನು ಕೈ ಬಿಡಬೇಕಾದ ಅಗತ್ಯವಿದೆ. ಇದಕ್ಕಾಗಿ ರಾಜ್ಯ ಸರಕಾರ ವಿಶೇಷ ಅಧಿವೇಶನವೊಂದನ್ನು ನಡೆಸಿ, ಚರ್ಚಿಸಬೇಕು ಎಂದು ಆಗ್ರಹಿಸಿದರು.
ರಾಜದ್ರೋಹ ಎಂಬುದು ವಿಶಾಲವಾದ ಅರ್ಥವನ್ನು ಹೊಂದಿರುವ ಹಾಗೂ ವಿಸ್ತಾರವಾದ ವ್ಯಾಖ್ಯಾನವನ್ನು ಹೊಂದಿದೆ. ಗಾಂಧಿ, ಬಾಲಗಂಗಾಧರ ತಿಲಕ ಸೇರಿದಂತೆ ಹಲವರು ರಾಜದ್ರೋಹ ಪ್ರಕರಣಗಳನ್ನು ಎದುರಿಸಿ ದ್ದಾರೆ. ಹೀಗಾಗಿ ರಾಜದ್ರೋಹ ಕಾನೂನು ಅನವಶ್ಯಕ ಎಂದರು.
ಪ್ರೊ.ಬಿ.ಕೆ.ಚಂದ್ರಶೇಖರ್ ಮಾತನಾಡಿ, ದೇಶ ಪ್ರೇಮದ ಬಗ್ಗೆ ಮಾತನಾಡುವ ಬಿಜೆಪಿ ಆಧಾರಗಳಿಲ್ಲದೆ ಗಲಾಟೆ, ಗದ್ದಲ ಮಾಡುತ್ತಿದ್ದ ಎಬಿವಿಪಿ ಕಾರ್ಯಕರ್ತರಿಗೆ ಬುದ್ಧಿ ಹೇಳುವುದು ಬಿಟ್ಟು ಅವರೊಂದಿಗೆ ಕೈ ಜೋಡಿಸಿದೆ ಎಂದು ದೂರಿದರು.
ರಮ್ಯಾ ಪಾಕಿಸ್ತಾನದ ಬಗ್ಗೆ ಹೇಳಿಕೆ ನೀಡಿದ್ದನ್ನು ಕೆಲವರು ತಪ್ಪಾಗಿ ಅರ್ಥಮಾಡಿಕೊಂಡು ಅನಗತ್ಯ ಗೊಂದಲ ನಿರ್ಮಾಣ ಮಾಡಿದರು. ಆದರೆ, ಪ್ರಧಾನಿ ಮೋದಿ ಹೇಳದೆ-ಕೇಳದೆ ಪಾಕಿಸ್ತಾನದ ಪ್ರಧಾನಿಯನ್ನು ಅವರ ಫಾರಂ ಹೌಸ್‌ನಲ್ಲಿ ಭೇಟಿಯಾದಾಗ ಹಾಗೂ ಎಂಟು ತಿಂಗಳ ಹಿಂದೆ ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಪಾಕಿಸ್ತಾನದ ಬಗ್ಗೆ ಹೇಳಿಕೆ ನೀಡಿದಾಗ ಬಿಜೆಪಿ ಏಕೆ ಚಕಾರವೆತ್ತಲಿಲ್ಲ ಎಂದು ಪ್ರಶ್ನಿಸಿದರು. ದೇಶದಲ್ಲಿ ಗೋ ರಕ್ಷಣೆ ಹೆಸರಿನಲ್ಲಿ ಸಂಘಪರಿವಾರದ ಕಾರ್ಯಕರ್ತರು ಕಾನೂನು ಕೈಗೆತ್ತಿಕೊಳ್ಳುತ್ತಿರುವಾಗ ಪೊಲೀಸರು ಏಕಾಗಿ ಬೇಕಾಗಿದೆ ಎಂದರು.







