ಅಗ್ರ ಶ್ರೇಯಾಂಕದ ತಂಡ ನಮ್ಮ ಗುರಿ: ರೋಹಿತ್

ಮುಂಬೈ, ಸೆ.3: ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧದ ನಾಲ್ಕನೆ ಟೆಸ್ಟ್ ಪಂದ್ಯ ಮಳೆಯಿಂದ ಕೊಚ್ಚಿ ಹೋದ ಕಾರಣದಿಂದಾಗಿ ಭಾರತ ಟೆಸ್ಟ್‌ನಲ್ಲಿ ನಂ.1 ಸ್ಥಾನವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಬೇಕಾಯಿತು. ಭಾರತ ತಂಡ ವಿಂಡೀಸ್ ವಿರುದ್ಧ 2-0 ಅಂತರದಲ್ಲಿ ಜಯ ಗಳಿಸಿತ್ತು. ಸೆಪ್ಟಂಬರ್ ತಿಂಗಳಾಂತ್ಯದಲ್ಲಿ ಆರಂಭಗೊಳ್ಳಲಿರುವ ನ್ಯೂಝಿಲೆಂಡ್ ವಿರುದ್ಧದ ತವರಿನ ಸರಣಿಯಲ್ಲಿ ಭಾರತ ಮತ್ತೆ ನಂ.1 ಸ್ಥಾನಕ್ಕೇರಲು ಪ್ರಯತ್ನ ನಡೆಸಲಿದೆ ಎಂದು ತಂಡದ ಅಗ್ರ ಸರದಿಯ ದಾಂಡಿಗ ರೋಹಿತ್ ಶರ್ಮ ಹೇಳಿದ್ದಾರೆ.
‘‘ಭಾರತ ನಂ.1 ಸ್ಥಾನವನ್ನು ವಾರದೊಳಗೆ ಕಳೆದುಕೊಂಡಿದೆ. ಭಾರತ ವಿಶ್ವದ ಅತ್ಯುತ್ತಮ ತಂಡವಾಗಿರಲು ಬಯಸಿದೆ. ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಮುಂದಿಟ್ಟಿದೆ. ಉತ್ತಮ ಕ್ರಿಕೆಟ್‌ನತ್ತ ಗಮನ ಹರಿಸಿದೆ ’’ಎಂದು ಹೇಳಿದರು.
ಮುಂಬೈನಲ್ಲಿ ಕ್ರೀಡಾ ಪತ್ರಕರ್ತರ ಸಂಘ(ಎಸ್‌ಜೆಎಂ) ರಜತ ವರ್ಷಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತದ ಮಾಜಿ ವೇಗಿ ಝಹೀರ್ ಖಾನ್ ಮುಖ್ಯ ಅತಿಥಿಯಾಗಿ ಮಾತನಾಡಿ‘‘ ಭಾರತ ಪ್ರಸ್ತುತ ಸಾಲಿನಲ್ಲಿ ಹಲವು ಟೆಸ್ಟ್‌ಗಳನ್ನು ಆಡಲಿದೆ ಇದರಿಂದ ಕ್ರಿಕೆಟ್ ಆಟಗಾರರ ವೃತ್ತಿ ಬದುಕಿನಲ್ಲಿ ಭಾರೀ ಬದಲಾವಣೆಯಾಗಲಿದೆ ’’ ಎಂದು ಹೇಳಿದರು.
ಅಜಿಂಕ್ಯ ರಹಾನೆ ಅವರು ಮಾತನಾಡಿ ‘‘ ನ್ಯೂಝಿಲೆಂಡ್ ವಿರುದ್ಧದ ಸರಣಿ ಅತ್ಯಂತ ಮಹತ್ವದ್ದಾಗಿದೆ’’ ಎಂದು ಹೇಳಿದರು.





