ಪೊಲೀಸ್ ದಾಳಿಯಲ್ಲಿ ಢಾಕಾ ದಾಳಿಯ ಉಗ್ರ ಹತ
ಢಾಕಾ, ಸೆ. 3: ಶುಕ್ರವಾರ ರಾತ್ರಿ ದಾಳಿ ನಡೆಸಿದ ಬಾಂಗ್ಲಾದೇಶ ಪೊಲೀಸರು, ಕಳೆದ ಜುಲೈಯಲ್ಲಿ ಢಾಕಾದ ಕೆಫೆಯೊಂದರ ಮೇಲೆ ದಾಳಿ ನಡೆಸಿದ ಭಯೋತ್ಪಾದಕರಿಗೆ ತರಬೇತಿ ನೀಡಿದ್ದಾನೆನ್ನಲಾದ ವ್ಯಕ್ತಿಯೊಬ್ಬನನ್ನು ಕೊಂದಿದ್ದಾರೆ.
ಕೆಫೆ ದಾಳಿಯಲ್ಲಿ 17 ವಿದೇಶೀಯರು ಸೇರಿದಂತೆ 20 ಮಂದಿ ಸಾವನ್ನಪ್ಪಿದ್ದಾರೆ. ಢಾಕಾದ ಉಪನಗರ ಮೀರ್‌ಪುರ್‌ನಲ್ಲಿ ನಡೆಸಿದ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಮುರಾದ್ ಎಂದು ಗುರುತಿಸಲಾಗಿದೆ. ಆತನನ್ನು ಜಹಾಂಗೀರ್ ಮತ್ತು ಉಮರ್ ಎಂಬುದಾಗಿಯೂ ಕರೆಯುತ್ತಾರೆನ್ನಲಾಗಿದೆ. ಆತನ ಪೂರ್ಣ ಗುರುತನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಆ ವ್ಯಕ್ತಿಯು ಮೂವರು ಪೊಲೀಸರಿಗೆ ಚೂರಿಯಿಂದ ಇರಿದ ಬಳಿಕ ಪೊಲೀಸರು ನಡೆಸಿದ ಪ್ರತಿ ದಾಳಿಯಲ್ಲಿ ಹತನಾದನು ಎಂದು ಪೊಲೀಸ್ ಭಯೋತ್ಪಾದನೆ ನಿಗ್ರಹ ಘಟಕದ ಮುಖ್ಯಸ್ಥ ಮುನೀರುಲ್ ಇಸ್ಲಾಮ್ ತಿಳಿಸಿದರು. ಆತ ಜುಮಾತುಲ್ ಮುಜಾಹಿದೀನ್ ಬಾಂಗ್ಲಾದೇಶ್ ಎಂಬ ನಿಷೇಧಿತ ಗುಂಪಿನ ಕಮಾಂಡರ್ ಆಗಿದ್ದ ಹಾಗೂ ಜುಲೈ ಒಂದರ ದಾಳಿಗಾಗಿ ಆತ ಉಗ್ರರನ್ನು ತಯಾರಿಸಿದ್ದ ಎಂದರು.
Next Story





