ತಾಯೆ್ನಲದ ಪ್ರಗತಿಗೆ ನಿಮ್ಮ ಪಾಲು ಇರಲಿ; ಅಕ್ಕ ಸಮ್ಮೇಳನದಲ್ಲಿ ಸಚಿವೆ ಉಮಾಶ್ರೀ ಕರೆ

ನ್ಯೂಜೆರ್ಸಿ, ಸೆ.3: ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ಶಕ್ತಿಗೆ ಅನುಗುಣವಾಗಿ ಕರ್ನಾಟಕದ ಪ್ರಗತಿಗೆ ಕಾಣಿಕೆ ಸಲ್ಲಿಸುವಂತಾಗಲಿ. ತಮ್ಮ ತಾಯ್ನೆಲದ ಪ್ರಗತಿಗೆ ಅಮೆರಿಕಾ ಕನ್ನಡಿಗರು ಕೊಡುಗೆ ನೀಡುವಂತಾಗಬೇಕು. ಹುಟ್ಟೂರಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಅದನ್ನು ಈಡೇರಿಸಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಕರೆ ನೀಡಿದ್ದಾರೆ.
ಶನಿವಾರ ಅಮೆರಿಕದ ನ್ಯೂಜೆರ್ಸಿಯಲ್ಲಿ ಆರಂಭವಾದ 9ನೆ ಅಕ್ಕ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು’ ಎಂಬ ಕುವೆಂಪು ಹೇಳಿದ ಸಾಲುಗಳು ಈ ಸಮ್ಮೇಳನವನ್ನು ನೋಡಿ ನನಗೆ ನೆನಪಾಗುತ್ತಿದೆ. ಕರ್ನಾಟಕದಿಂದ ಸಾವಿರಾರು ಮೈಲಿ ದೂರದಲ್ಲಿ ಸಪ್ತ ಸಾಗರದಾಚೆ ದೊಡ್ಡ ಸಂಖ್ಯೆಯಲ್ಲಿ ಕನ್ನಡಿಗರು ಸೇರಿ ಕನ್ನಡದ ಹಬ್ಬ ಆಚರಿಸುತ್ತಿರುವುದು ನನಗೆ ರೋಮಾಂಚನವಾಗಿದೆ ಎಂದರು.
ಜಗತ್ತಿನ ಅತ್ಯಂತ ಮುಂದುವರಿದ ದೇಶವಾದ ಅಮೆರಿಕದಲ್ಲಿ ಕನ್ನಡದ ಕಹಳೆ ಮೊಳಗಿಸುತ್ತಿರುವ ನನ್ನ ತಾಯ್ನಿಡಿನ ಎಲ್ಲ್ಲ ಬಂಧುಗಳಿಗೂ ಅತ್ಯಂತ ಅಭಿಮಾನಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಈ ದಿನ ಈ ನೆಲದಲ್ಲಿ ಕನ್ನಡ ಭಾಷೆ, ಸಂಸ್ಕೃತಿಯನ್ನು ಕುರಿತು ಕನ್ನಡತನದ ಕಾರ್ಯ ಕ್ರಮವನ್ನು ರೂಪಿಸಿ, ಸಾವಿರಾರು ಮೈಲಿ ದೂರದಿಂದ ನಮ್ಮ ಕನ್ನಡಿಗ ಬಂಧುಗಳನ್ನು ಇಲ್ಲಿಗೆ ಆಹ್ವಾನಿಸಿ, ಈ ಉತ್ಸವವನ್ನು ಅತ್ಯಂತ ಅದ್ದೂರಿಯಾಗಿ ಆಯೋಜಿಸಿರುವ ‘ಅಕ್ಕ’ ಸಂಸ್ಥೆಗೆ ನನ್ನ ಅಭಿನಂದನೆಗಳು ಎಂದರು.
ಕನ್ನಡಿಗರು ಇಂದು ವಿಶ್ವದಾದ್ಯಂತ ಎಲ್ಲ ದೇಶಗಳಲ್ಲಿಯೂ ದೊಡ್ಡ ಸಂಖ್ಯೆಯಲ್ಲಿ ನೆಲೆಸಿದ್ದು, ಅದಕ್ಕೆ ಉದ್ಯೋಗ, ವ್ಯವಹಾರ ಹಾಗೂ ಶೈಕ್ಷಣಿಕ ಕಾರಣಗಳಿರಬಹುದು. ಹಾಗೆಯೇ ಬದುಕನ್ನು ಅರಸಿ ಹೋದ ಕನ್ನಡಿಗರ ಸಂಖ್ಯೆಯೂ ಕಡಿಮೆಯೇನಲ್ಲ. ಹಾಗೆ ಹೋದವರು ಅಲ್ಲಿಯೇ ನೆಲೆಯಾಗಿ ಅಲ್ಲಿಯೇ ತಮ್ಮ ಬದುಕನ್ನು ಕಟ್ಟಿಕೊಂಡವರ ಸಂಖ್ಯೆಯೂ ಗಮನಾರ್ಹ ಎಂದರು.
ನಾನಾ ಕಾರಣಗಳಿಗಾಗಿ ಇಲ್ಲಿ ನೆಲೆಸಿರುವ ನೀವು ಕರ್ನಾಟಕದ ಬಗೆಗಿನ ಪ್ರೀತಿಯನ್ನು ಹಾಗೆ ಉಳಿಸಿಕೊಳ್ಳಬೇಕೆಂಬುದು ಹಾಗೂ ನಿಮ್ಮ ಪ್ರತಿಭೆಯನ್ನು ತಾಯ್ನೆಲದ ಬೆಳವಣಿಗೆಗಾಗಿಯೂ ಬಳಸಿ ಎಂಬುದಷ್ಟೇ ನನ್ನ ವಿನಂತಿ. ಇಲ್ಲಿರುವ ಉದ್ಯಮಿಗಳು ಕರ್ನಾಟಕದಲ್ಲಿ ಬಂಡವಾಳ ಹೂಡಿ, ರಾಜ್ಯದ ಪ್ರಗತಿಗೂ ಕಾರಣರಾಗಿ ಎಂದು ಮನವಿ ಮಾಡಿದರು.
ಸಹಾಯ ಮಾಡಲು ಶಕ್ತಿಯಿರುವವರು ಕರ್ನಾಟಕದಲ್ಲಿ ತಾವು ಹುಟ್ಟಿದ ನಗರ, ಗ್ರಾಮಗಳಲ್ಲಿ ಸಣ್ಣ ಮಟ್ಟದ್ದಾದರೂ ಅಭಿವೃದ್ಧಿ ಕೆಲಸಕ್ಕೆ ಕೈಜೋಡಿಸಿ. ಅದು ಕುಡಿಯುವ ನೀರು ಪೂರೈಕೆಗಿರಬಹುದು, ಶೌಚಾಲಯ ನಿರ್ಮಾಣ ಅಥವಾ ಮಾದರಿ ಗ್ರಾಮ ನಿರ್ಮಾಣ ಆಗಿರಬಹುದು ಯಾವುದಾದರೂ ಒಂದು ರೀತಿಯಲ್ಲಿ ತಾಯ್ನೆಲದ ಪ್ರಗತಿಗೆ ಕೊಡುಗೆ ನೀಡಬೇಕೆಂದು ಕೋರಿದರು.







