‘ತಮನ್ನಾ’ಗಾಗಿ ಹಾಡಲಿರುವ ಶ್ರುತಿ

ಸಾಮಾನ್ಯವಾಗಿ ಸೂಪರ್‌ಸ್ಟಾರ್ ನಟಿಯರು, ತಮ್ಮ ಚಿತ್ರದಲ್ಲಿ ಇನ್ನೊಬ್ಬ ಖ್ಯಾತ ಹಿರೋಯಿನ್ ಇದ್ದಲ್ಲಿ, ಆ ಚಿತ್ರವನ್ನು ಒಪ್ಪಿಕೊಳ್ಳಲು ಸಾಕಷ್ಟು ಯೋಚಿಸುತ್ತಾರೆ. ತಮ್ಮ ಸ್ಟಾರ್‌ವ್ಯಾಲ್ಯೂಗೆ ಯಾವುದೇ ಲೋಪ ಬಾರದಂತೆ ನೋಡಿಕೊಳ್ಳಲು ಇನ್ನಿಲ್ಲದಷ್ಟು ಜಾಗರೂಕತೆ ವಹಿಸುತ್ತಾರೆ. ಅಂತಹದ್ದರಲ್ಲಿ ಓರ್ವ ಸೂಪರ್‌ಸ್ಟಾರ್ ನಟಿ, ಇನ್ನೋರ್ವ ಖ್ಯಾತ ನಟಿಗಾಗಿ ಹಾಡಲು ಒಪ್ಪಿಕೊಳ್ಳುವುದು ತೀರಾ ಅಪರೂಪ. ಆದರೆ ತಮಿಳು, ತೆಲುಗಿನ ಖ್ಯಾತ ನಟಿ, ಕಮಲ್ ಪುತ್ರಿ ಶ್ರುತಿ ಹಾಸನ್ ಇದಕ್ಕೊಂದು ಅಪವಾದ.

ವಿಶಾಲ್ ಹಾಗೂ ತಮನ್ನಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ‘ಕತ್ತಿಸಂಡೈ’ ತಮಿಳುಚಿತ್ರಕ್ಕಾಗಿ ಆಕೆ ಹಾಡಲಿದ್ದಾರೆ. ಚಿತ್ರದ ನಾಯಕಿ ತಮನ್ನಾಗಾಗಿ ಈ ಹಾಡನ್ನು ಶ್ರುತಿ ಹಾಡಲಿದ್ದಾರೆ. ಅಭಿನಯದ ಜೊತೆಗೆ ಗಾಯಕಿಯಾಗಿಯೂ ಸೈ ಎನಿಸಿಕೊಂಡಿರುವ ಶ್ರುತಿ ಹಾಸನ್, ಇನ್ನೋರ್ವ ಖ್ಯಾತ ನಟಿಗಾಗಿ ಹಾಡಿರುವುದು ಇದೇ ಮೊದಲ ಸಲವಾಗಿದೆ. ಶ್ರುತಿ ಕೆಲವು ವಾರಗಳವರೆಗೆ ತಮಿಳು, ತೆಲುಗು ಚಿತ್ರಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವುದರಿಂದ, ಆಕೆಗೆ ಬಿಡುವು ದೊರೆತ ಬೆನ್ನಲ್ಲೇ ಈ ಹಾಡನ್ನು ರೆಕಾರ್ಡಿಂಗ್ ಮಾಡಲಾಗುವುದೆಂದು ಚಿತ್ರತಂಡ ಹೇಳಿಕೊಂಡಿದೆ. ‘ಹಿಪ್‌ಹಾಪ್’ ಶೈಲಿಯ ಈ ಹಾಡು ಕೇಳುಗರಿಗೆ ಖಂಡಿತವಾಗಿಯೂ ಇಷ್ಟವಾಗಲಿದೆೆಯೆಂದು ನಿರ್ದೇಶಕ ಸೂರಜ್ ಅವರ ಅಂಬೋಣ.





