ಬಿಹಾರದಲ್ಲಿ ಇನ್ನು ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಹೊಸ ಷರತ್ತು
.jpg)
ಪಾಟ್ನ,ಸೆಪ್ಟಂಬರ್ 4: ಬಿಹಾರದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಪ್ರಕ್ರಿಯೆನ್ನು ಆಧಾರ್‌ಕಾರ್ಡ್‌ಗೆ ಜೋಡಿಸಲು ಅಲ್ಲಿನ ಪರೀಕ್ಷಾ ಮಂಡಳಿ ನಿರ್ಧರಿಸಿದೆ ಎಂದು ವರದಿಯಾಗಿದೆ. ಪರೀಕ್ಷಾ ಫಾರ್ಮ್‌ಗಳಲ್ಲಿ ಆಧಾರ್ ನಂಬರ್‌ಗಳನ್ನು ಬರೆಯಿಸುವ ಮೂಲಕ ನಕಲು ನಡೆಸುವ ಹಾವಳಿಯನ್ನು ತಡೆಯಲುಸಾಧ್ಯವೆಂದು ಪರೀಕ್ಷಾಮಂಡಳಿಯ ಅಧಿಕಾರಿಗಳು ಚಿಂತಿಸಿದ್ದಾರೆ. ನವಂಬರ್‌ನಲ್ಲಿ ನಡೆಯುವ ಪರೀಕ್ಷೆಗಳ ನಂತರ ಈ ಕ್ರಮ ಜಾರಿಗೆ ಬರಲಿದೆ.
ಪರೀಕ್ಷಾ ಫಾರ್ಮ್‌ನ್ನು ಸಲ್ಲಿಸುವಾಗ ವಿದ್ಯಾರ್ಥಿಗಳು ತಮಗೆ ಆಧಾರ್ ಅಕೌಂಟಿದೆಯೇ ಎಂದು ತಿಳಿಸಬೇಕು. ಆಧಾರ್ ಇಲ್ಲದವರು ಆಧಾರ್‌ಗೆ ಅರ್ಜಿ ಸಲ್ಲಿಸಿ ಆಧಾರ್ ಕಾರ್ಡ್ ಪಡೆದು ಅದರ ನಂಬರನ್ನು ಫಾರ್ಮ್‌ನಲ್ಲಿ ನಮೂದಿಸಬೇಕು. ಆಧಾರ್ ಇದ್ದವರು ಫಾರ್ಮ್‌ನಲ್ಲಿ ತಮ್ಮ ನಂಬರ್‌ನ್ನು ಬರೆಯಬೇಕು ಎಂದು ಪರೀಕ್ಷಾ ಮಂಡಳಿ ಅಧ್ಯಕ್ಷ ಆನಂದ್ ಕಿಶೋರ್ ಹೇಳಿದ್ದಾರೆ.
ಇತ್ತೀಚೆಗೆ ಬಿಹಾರದಲ್ಲಿ ನಡೆದಿರುವ ಪರೀಕ್ಷಾ ಹಗರಣ ಮಂಡಳಿಯನ್ನು ನಾಚಿಕೆಗೇಡಿಗೆ ಸಿಲುಕಿಸಿದ ಹಿನ್ನೆಲೆಯಲ್ಲಿ ಹೊಸ ಸುಧಾರಣಾಕ್ರಮಕ್ಕೆ ಅದು ಮುಂದಾಗಿದೆ ಎಂದು ವರದಿ ತಿಳಿಸಿದೆ.





