ರಾಜಸ್ಥಾನ, ಗುಜರಾತ್ ನ ಬಂಜರು ಭೂಮಿಗಳು ನಳನಳಿಸುವಂತೆ ಮಾಡಲಿದ್ದಾರೆ ಗಡ್ಕರಿ !
ಮಹತ್ವಾಕಾಂಕ್ಷಿ ಯೋಜನೆಯ ಕುತೂಹಲಕಾರಿ ಮಾಹಿತಿಗಳು

ಜೈಪುರ,ಸೆ. 4: ಗ್ರೇಟ್ ಇಂಡಿಯನ್ ಡೆಸರ್ಟ್ ಎನಿಸಿದ ರಾಣ್ ಆಫ್ ಕಚ್ ಬರಡುಭೂಮಿಯನ್ನು ನಳನಳಿಸುವಂತೆ ಮಾಡಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಕನಸು ಕಂಡಿದ್ದ ಗುಜರಾತ್‌ನಿಂದ ರಾಜಸ್ಥಾನಕ್ಕೆ 850 ಕಿಲೋಮೀಟರ್ ಉದ್ದದ ನಾಲೆ ನಿರ್ಮಿಸುವ ಕನಸು ಇದೀಗ ನನಸಾಗುತ್ತಿದೆ.
"ಗುಜರಾತ್- ರಾಜಸ್ಥಾನ ಗಡಿಯ ಕಾಂಡ್ಲಾದಿಂದ ಜೈಸಲ್ಮೇರ್ ಹಾಗೂ ಜಾಲೋರ್‌ಗೆ 850 ಕಿಲೋಮೀಟರ್ ಉದ್ದದ ನಾಲೆ ನಿರ್ಮಿಸುವ ಯೋಜನೆ ನನ್ನ ಕನಸು. ಇದು ಉಭಯ ರಾಜ್ಯಗಳ ಆರ್ಥಿಕತೆಯನ್ನೇ ಬದಲಿಸಲಿದೆ" ಎಂದು ಅವರು ಹೇಳಿದ್ದಾರೆ.
ಈ ಯೋಜನೆ ಇನ್ನೂ ಆರಂಭಿಕ ಹಂತದಲ್ಲಿದ್ದು, ಅರಬ್ಬಿ ಸಮುದ್ರದ ನೀರನ್ನು ಗುಜರಾತ್‌ನಿಂದ ರಾಜಸ್ಥಾನದ ರಾಣ್ ಆಫ್ ಕಚ್ ಹಾಗೂ ಥಾರ್ ಮರಭೂಮಿಯ ಬರಡು ಭೂಮಿಗೆ ಹರಿಸಲಾಗುವುದು ಎಂದು ಅವರು ವಿವರಿಸಿದ್ದಾರೆ. ಈ ಯೋಜನೆಯು ನೀರಿನ ಸಮಸ್ಯೆ ಬಗೆಹರಿಸುವುದಲ್ಲದೇ, ಸ್ವಚ್ಛ ಕುಡಿಯುವ ನೀರು, ಉಪ್ಪು, ಅನಿಲವನ್ನು ಯೂರಿಯಾ ಘಟಕಕ್ಕೆ ಪೂರೈಸಲಿದೆ. ವಿದ್ಯುತ್ ಶುಲ್ಕವನ್ನು ಕಡಿಮೆ ಮಾಡಲಿದ್ದು, ಕರಾವಳಿ ಪ್ರದೇಶದಲ್ಲಿ ಕಲ್ಲಿದ್ದಲು ಸಾಗಾಣಿಕೆ ಚುರುಕುಗೊಳಿಸಲಿದೆ. ಸುಣ್ಣ ಹಾಗೂ ಇತರ ಉದ್ಯಮ ಬೆಳೆಯಲಿದ್ದು, ಕನಿಷ್ಠ ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ವಿವರ ನೀಡಿದರು.
ಸಮುದ್ರ ನೀರಿನಿಂದ 1000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿಯೂ ಇದೆ. ಕಾಲುವೆಯ ಒಂದು ಕಡೆ ಹೆದ್ದಾರಿ ಹಾಗು ಇನ್ನೊಂದು ಕಡೆ ರೈಲು ಹಳಿ ನಿರ್ಮಾಣ ಮಾಡಲಾಗುವುದು ಎಂದರು.





