ಸ್ನೇಹಿತರ ಕಣ್ಣೆದುರೇ ಕಾರ್ಮಿಕನನ್ನು ಕಲ್ಲಿನಿಂದ ಜಜ್ಜಿ ಹತ್ಯೆ

ಕಾಸರಗೋಡು, ಸೆ.4 ಸ್ನೇಹಿತರ ಕಣ್ಮುಂದೆಯೇ ಕಾರ್ಮಿಕನೋರ್ವನನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದ ಘಟನೆ ನಗರ ಹೊರವಲಯದ ನುಳ್ಳಿಪ್ಪಾಡಿಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಕೊಲೆಗೀಡಾದವರನ್ನು ಕರ್ನಾಟಕದ ಕೊಪ್ಪಳ ಮಲಗ ಸಮುದ್ರದ ನಿವಾಸಿ ಶರಣಪ್ಪ (39) ಎಂದು ಗುರುತಿಸಲಾಗಿದೆ. ಕೃತ್ಯಕ್ಕೆ ಸಂಬಂಧಪಟ್ಟಂತೆ ಕಾಸರಗೋಡು ಚೆನ್ನಿಕ್ಕರೆ ಕಾಲನಿಯ ಮಣಿ(32) ಎಂಬಾತನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ನುಳ್ಳಿಪ್ಪಾಡಿಯಲ್ಲಿ ಅಂಗಡಿಯೊಂದರ ಮುಂಭಾಗದಲ್ಲಿ ಈ ಘಟನೆ ನಡೆದಿದೆ. ಶರಣಪ್ಪನಿನ್ನೆ ಕೆಲಸ ಮುಗಿಸಿ ತನ್ನ ಸ್ನೇಹಿತರಾದ ಕರ್ನಾಟಕದ ಕುಮಾರ್, ಮಾರುತಿ, ಮುಹಮ್ಮದ್ ಮಸ್ತಾನ್, ಮಲ್ಲಿಕಾರ್ಜುನ ಎಂಬವರ ಜತೆ ಸೇರಿ ಅಂಗಡಿ ಜಗಲಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ ಆರೋಪಿ ಮಣಿ ಹಫ್ತಾ ಹಣ ಕೇಳಿದನೆನ್ನಲಾಗಿದೆ. ಆದರೆ ಹಣ ನೀಡಲು ಶರಣಪ್ಪಒಪ್ಪಲಿಲ್ಲ. ಇದರಿಂದ ಕೆರಳಿದ ಮಣಿ ಜಗಳಕ್ಕೆ ಇಳಿದನೆನ್ನಲಾಗಿದೆ. ಜಗಳ ತಾರಕಕ್ಕೇರಿದಾಗ ಮಣಿ ಸಮೀಪದಿಂದ ಕಲ್ಲೊಂದನ್ನು ತಂದು ಶರಣಪ್ಪರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದನೆನ್ನಲಾಗಿದೆ. ತಡೆಯಲು ಯತ್ನಿಸಿದ ಮಾರುತಿಯ ಮುಖಕ್ಕೂ ಕಲ್ಲಿನಿಂದ ಜಜ್ಜಿ ಗಾಯಗೊಳಿಸಿ ಅಲ್ಲಿಂದ ಪರಾರಿ ಯಾಗಿದ್ದನು. ಗಂಭೀರ ಗಾಯಗೊಂಡ ಶರಣಪ್ಪರನ್ನು ನುಳ್ಳಿಪ್ಪಾಡಿಯ ಖಾಸಗಿ ಆಸ್ಪತ್ರೆಗೆ ತಲುಪಿ ಸಿದರೂ ಜೀವ ಉಳಿಸಲಾಗಲಿಲ್ಲ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಥೋಮ್ಸನ್ ಜೋಸ್, ಡಿವೈಎಸ್ಪಿ ಸುಕುಮಾರನ್, ಕಾಸರಗೋಡು ಸರ್ಕಲ್ ಇನ್‌ಸ್ಪೆಕ್ಟರ್ ಅಬ್ದುಲ್ ರಹೀಂ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿ ಮಣಿಯನ್ನು ಬಂಧಿಸಿದ್ದಾರೆ.
ಮಣಿ ಹಲವು ಪ್ರಕರಣಗಳ ಆರೋಪಿ
ಕೊಲೆ ಆರೋಪಿ ಮಣಿ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. 2008 ಜನವರಿ 22ರಂದು ರಾಷ್ಟ್ರೀಯ ಹೆದ್ದಾರಿಯ ನುಳ್ಳಿಪ್ಪಾಡಿಯಲ್ಲಿ ವಾಹನ ತಡೆದು ನಿಲ್ಲಿಸಿ ಯುವಕನನ್ನು ಆಕ್ರಮಿಸಿದ ಪ್ರಕರಣ, 2013ರ ಡಿಸೆಂಬರ್12ರಂದು ನುಳ್ಳಿಪ್ಪಾಡಿಯಲ್ಲಿ ಹಾಶಿಂ ಎಂಬವರ ಹತ್ಯೆಗೆತ್ನಿಸಿದ ಪ್ರಕರಣದಲ್ಲೂ ಈತ ಆರೋಪಿಯಾಗಿದ್ದಾನೆ. ಹಾಶಿಂರಲ್ಲಿ ಮಣಿ ಹಣ ಕೇಳಿದ್ದು, ಅವರು ಹಣ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರ ಮೇಲೂ ಆಕ್ರಮಿಸಿ ಕೊಲೆಗೈಯ್ಯಲು ಯತ್ನಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ.







