ಕಡಬ: ಅಲ್ಪಸಂಖ್ಯಾತ ವಿದ್ಯಾರ್ಥಿ ವೇತನ ಮಾಹಿತಿ ಶಿಬಿರ

ಕಡಬ, ಸೆ.4: ಇಲ್ಲಿಯ ರೋಟರಿ ಕ್ಲಬ್ ವತಿಯಿಂದ ಕಡಬ ಮಾದರಿ ಹಿ.ಪ್ರಾ. ಶಾಲೆಯಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿ ವೇತನದ ಮಾಹಿತಿ ಶಿಬಿರವು ಶನಿವಾರ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಕಡಬ ತಹಶೀಲ್ದಾರ್ ಬಿ.ಲಿಂಗಯ್ಯ ಸರಕಾರದಿಂದ ಅಲ್ಪಸಂಖ್ಯಾತರಿಗೆ ಸೇರಿದಂತೆ ಹಿಂದುಳಿದವರಿಗೆ, ಪ.ಜಾತಿ ಪಂಗಡದವರಿಗೆ ಹಾಗೂ ಇತರರಿಗೆ ಎಲ್ಲ ರೀತಿಯ ಸೌಲಭ್ಯಗಳು ದೊರೆತಿದ್ದು ಇದನ್ನು ಪಡೆದುಕೊಳ್ಳುವಲ್ಲಿ ಸಾರ್ವಜನಿಕರು ಮುಂದೆ ಬರಬೇಕು ಎಂದರು.
ಜಿಪಂ ಸದಸ್ಯ ಪಿ.ಪಿ.ವರ್ಗಿಸ್ ಮಾತನಾಡಿ, ಸರಕಾರ ಸೌಲಭ್ಯಗಳನ್ನು ನೀಡುವುದರೊಂದಿಗೆ ದಾಖಲೆಗಳಿಗಾಗಿ ಅಲೆದಾಟ ತಪ್ಪಿಸಲು ಪ್ರತೀ ಗ್ರಾಪಂ ಮಟ್ಟದಲ್ಲಿ ಬಾಪೂಜಿ ಕೇಂದ್ರಗಳನ್ನು ತೆರೆದು ನೂರು ಸೇವೆಗಳನ್ನು ಆರಂಭಿಸಲಾಗುತ್ತಿದೆ.
ಆ ಮುಖಾಂತರ ಗ್ರಾಮ ವಿಕೇಂದ್ರೀಕರಣದ ಮೂಲ ಉದ್ದೇಶವನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು. ಕಡಬ ರಹ್ಮಾನಿಯಾ ಟೌನ್ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಎಸ್. ಅಬ್ದುಲ್ ಖಾದರ್ ಮಾತನಾಡಿ, ಶುಭ ಹಾರೈಸಿದರು. ರೋ. ಮುಹಮ್ಮದ್ ರಫೀಕ್ ಪ್ರಾಸ್ತಾವಿಕವಾಗಿ ಮಾತನಾಡಿ ಕೇಂದ್ರ, ರಾಜ್ಯ ಸರಕಾರದಿಂದ ಹಾಗೂ ಖಾಸಗಿ ಸಂಘ-ಸಂಸ್ಥೆಗಳಿಂದ ದೊರೆಯುವ ಸ್ಕಾಲರ್ ಶಿಪ್ ಸೇರಿದಂತೆ ಎಲ್ಲ ಸೌಲ್ಯಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.
ಕಡಬ ಗ್ರಾಪಂ ಸದಸ್ಯ ಶರೀಫ್ ಎ.ಎಸ್., ಕಡಬ ವರ್ತಕ ಸಂಘದ ಪ್ರಧಾನ ಕಾರ್ಯದರ್ಶಿ ಸುಜಿತ್ ಪಿ.ಕೆ., ಕಳಾರ ಸ.ಹಿ.ಪ್ರಾ. ಶಾಲಾ ಮುಖ್ಯಗುರು ಹಮೀದ್ ಮಾಸ್ಟರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಡಬ ರೋಟರಿ ಕ್ಲಬ್ ಅಧ್ಯಕ್ಷ ಥೋಮಸ್ ಇ.ಕೆ. ಸ್ವಾಗತಿಸಿದರು. ಕಾರ್ಯದರ್ಶಿ ಸಂತೋಷ್ ವಂದಿಸಿದರು. ಯೂಸುಫ್ ನೌಷಾದ್ ಕಾರ್ಯಕ್ರಮ ನಿರೂಪಿಸಿದರು.







