ಮದರ್ ತೆರೆಸಾ ಮಹಾ ಮಾನವತಾ ವಾದಿ : ಶಾಸಕ ಅಭಯಚಂದ್ರ ಜೈನ್

ಮುಲ್ಕಿ, ಸೆ.4: ಮಹಾ ಮಾನವತಾ ವಾದಿಯಾಗಿದ್ದ ಮದರ್ ತೆರೆಸಾ ರವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸೌಹಾರ್ದಯುತ ಜೀವನ ಕಾಣಬೇಕು ಎಂದು ಮಾಜಿ ಸಚಿವರು ಹಾಗೂ ಮುಲ್ಕಿ ಮೂಡಬಿದಿರೆ ಶಾಸಕ ಅಭಯ ಚಂದ್ರ ಜೈನ್ ಹೇಳಿದರು. ಮುಲ್ಕಿ ಅಮಲೋದ್ಭವ ಮಾತಾ ಚರ್ಚ್ ರಸ್ತೆಯ ಸುಮಾರು 5ಲಕ್ಷ ವೆಚ್ಚದ ಕಾಂಕ್ರೀಟೀಕರಣ ಮತ್ತು ದಾರಿ ದೀಪ ಕಾಮಗಾರಿಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮುಲ್ಕಿ ಅಮಲೋದ್ಭವ ಮಾತಾ ಚರ್ಚ್ ಸಮುದಾಯ ಭವನ ನಿರ್ಮಾಣ ಯೋಜನೆಗೆ 50ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ಶಾಸಕರು ಇದೇ ವೇಳೆ ಘೋಶಿಸಿದರು.
ಈ ಸಂದರ್ಭ ಶಿಕ್ಷಕರ ದಿನಾಚರಣೆಯ ಪೂರ್ವಭಾವಿಯಾಗಿ ಚರ್ಚ್ ಸಭೆಯ ಶಿಕ್ಷಕರನ್ನು ಗೌರವಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಅಲ್ಲದೆ, ಚರ್ಚ್‌ನ ವತಿಯಿಮದ ಶಾಸಕ ಅಭಯಚಂದ್ರ ಜೈನ್ ರವರನ್ನು ಸನ್ಮಾನಿಸಲಾಯಿತು.
ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಮುಲ್ಕಿ ನಗರ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಸುನಿಲ್ ಆಳ್ವಾ, ಚರ್ಚ್‌ನ ಧರ್ಮಗುರು ಫಾ.ಪ್ರಾನ್ಸಿಸ್ ಝೇವಿಯರ್ ಗೋಮ್ಸ್, ಮುಲ್ಕಿ ನಗರ ಪಂಚಾಯತ್ ಸದಸ್ಯ ಪುತ್ತುಬಾವ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಜೋಯಲ್ ಹೆರಾಲ್ಡ್ ಡಿಸೋಜ, ಸದಸ್ಯರಾದ ರೋಲ್ಫಿ ಡಿಕೋಸ್ಟಾ, ಡಾ.ಸುರೇಶ್ ಅರಾಹ್ನ, ಗೋಡ್ವಿನ್ ಎಮಿಲ್ಡಾ ಮತ್ತಿತರರು ಉಪಸ್ಥಿತರಿದ್ದರು.







