ಆ್ಯಂಬುಲನ್ಸ್‌ಗಾಗಿ ಪರದಾಡಿ ರಾತ್ರಿಯಿಡೀ ಆಸ್ಪತ್ರೆಯ ಹೊರಗೆ ಮಗಳ ಶವದೊಂದಿಗೆ ಕಳೆದ ತಾಯಿ

ಮೀರತ್,ಸೆ.4: ಕಾನಪುರದ ಆಸ್ಪತ್ರೆಯೊಂದರಲ್ಲಿ ತಂದೆಯೋರ್ವ ಗಂಭೀರ ಅನಾರೋಗ್ಯಕ್ಕೊಳಗಾಗಿದ್ದ ತನ್ನ ಮಗನನ್ನು ಹೆಗಲ ಮೇಲೆ ಹೊತ್ತುಕೊಂಡು ವಾರ್ಡ್‌ನಿಂದ ವಾರ್ಡಿಗೆ ಅಲೆದಾಡಿಸಲ್ಪಟ್ಟು ಕೊನೆಗೂ ತನ್ನ ಕರುಳಕುಡಿಯನ್ನು ಕಳೆದುಕೊಂಡ ದಾರುಣ ಘಟನೆ ನೆನಪಿನಿಂದ ಮಾಸುವ ಮುನ್ನವೇ ಮೀರತ್‌ನಲ್ಲಿ ಅಂತಹುದೇ ಇನ್ನೊಂದು ಹೃದಯವಿದ್ರಾವಕ ಘಟನೆ ನಡೆದಿದೆ. ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ತನ್ನ ಎರಡೂವರೆ ವರ್ಷದ ಪುತ್ರಿಯ ಶವವನ್ನು ತನ್ನ ಗ್ರಾಮಕ್ಕೆ ಸಾಗಿಸಲು ಪರದಾಡಿದ ತಾಯಿಯೋರ್ವಳು ಕೊನೆಗೂ ಆ್ಯಂಬುಲನ್ಸ್ ದೊರೆಯದೆ ರಾತ್ರಿಯಿಡೀ ಶವದೊಂದಿಗೆ ಜಿಲ್ಲಾಸ್ಪತ್ರೆಯ ತುರ್ತುಚಿಕಿತ್ಸಾ ಘಟಕದ ಹೊರಗೆ ಕಳೆದಿದ್ದಾಳೆ. ಆಕೆಯ ಗ್ರಾಮ ಬೇರೊಂದು ಜಿಲ್ಲೆಯಲ್ಲಿರುವುದರಿಂದ ಆ್ಯಂಬುಲನ್ಸ್ ಚಾಲಕರು ಶವ ಸಾಗಿಸಲು ನಿರಾಕರಿಸಿದ್ದರು.
ಬಾಘಪತ್ ಜಿಲ್ಲೆಯ ಗೌರಿಪುರ ಗ್ರಾಮದ ನಿವಾಸಿ ಇಮ್ರಾನಾಳ ಮಗು ಗುಲ್ನಾದ್ ತೀವ್ರ ಜ್ವರದಿಂದ ಬಳಲುತ್ತಿದ್ದು ಆಕೆಯನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ರಾತ್ರಿ ಆಕೆಯ ದೇಹಸ್ಥಿತಿ ತೀರ ಹದಗೆಟ್ಟಿದ್ದು, ವೈದ್ಯರು ಇಲ್ಲಿಯ ಲಾಲಾ ಲಜಪತ್ ರಾಯ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದರು. ಇಮ್ರಾನಾ ಮಗುವನ್ನು ಅಲ್ಲಿಗೆ ಮಗುವನ್ನು ಒಯ್ದಳಾದರೂ ಅದು ದಾರಿಮಧ್ಯೆಯೇ ಕೊನೆಯುಸಿರೆಳೆದಿತ್ತು.
ಮಗಳ ಶವವನ್ನು ಊರಿಗೆ ಒಯ್ಯಲು ಆ್ಯಂಬುಲನ್ಸ್‌ಗಾಗಿ ಆಕೆ ಗೋಗರೆದಳೂ,ತಾನು ಬೇರೆ ಜಿಲ್ಲೆಗೆ ಅ್ಯಂಬುಲನ್ಸ್ ಒಯ್ಯುವಂತಿಲ್ಲ ಎಂದು ಹೇಳಿ ಚಾಲಕ ನಿರಾಕರಿಸಿದ್ದ.
ಜಿಲ್ಲಾಸ್ಪತ್ರೆಯ ಅಧಿಕಾರಿಗಳು ನೆರವಾಗಬಹುದು ಎಂಬ ನಿರೀಕ್ಷೆಯಿಂದ ಇಮ್ರಾನಾ ಖಾಸಗಿ ಆ್ಯಂಬುಲನ್ಸ್‌ಗೆ 200 ರೂ.ನೀಡಿ ಮಗಳ ಶವವನ್ನು ಅಲ್ಲಿಗೆ ಒಯ್ದಿದ್ದಳು. ಆದರೆ ಅಲ್ಲಿಯೂ ಆಕೆಗೆ ಆ್ಯಂಬುಲನ್ಸ್ ಸೇವೆಯನ್ನು ನಿರಾಕರಿಸಲಾಗಿತ್ತು. ಖಾಸಗಿ ಆ್ಯಂಬುಲನ್ಸ್‌ಗಳು 2,500 ರೂ.ಕೇಳಿದ್ದು ಅಷ್ಟೊಂದು ಹಣ ಆಕೆಯ ಬಳಿಯಿರಲಿಲ್ಲ.
ಹೀಗಾಗಿ ಇಮ್ರಾನಾ ರಾತ್ರಿಯಿಡೀ ಮಗುವಿನ ಶವವನ್ನು ಮಡಿಲಲ್ಲಿಟ್ಟುಕೊಂಡು ತುರ್ತುಚಿಕಿತ್ಸಾ ಘಟಕದ ಹೊರಗೆ ಕಳೆದಿದ್ದಳು.
ಮರುದಿನ ಬೆಳಿಗ್ಗೆ ಕೆಲವು ಹೃದಯವಂತರು ಆಕೆಯ ಸ್ಥಿತಿಯನ್ನು ಕಂಡು ಮರುಕಗೊಂಡು ಹಣವನ್ನು ಒಟ್ಟುಗೂಡಿಸಿ ಖಾಸಗಿ ಆ್ಯಂಬುಲನ್ಸ್ ವ್ಯವಸ್ಥೆ ಮಾಡಿಕೊಟ್ಟಿದ್ದರು.
ಈ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿರುವುದಾಗಿ ಜಿಲ್ಲಾಧಿಕಾರಿ ಜಗತ್‌ರಾಜ್ ತ್ರಿಪಾಠಿ ಹೇಳಿದ್ದಾರೆ.







