ಕಾಶ್ಮೀರದಲ್ಲಿ ಸರ್ವಪಕ್ಷ ನಿಯೋಗ

ಶ್ರೀನಗರ,ಸೆ.4: ಜಮ್ಮು-ಕಾಶ್ಮೀರದಲ್ಲಿ ಶಾಂತಿ ಮರುಸ್ಥಾಪನೆಯ ಉದ್ದೇಶದೊಂದಿಗೆ ಗೃಹಸಚಿವ ರಾಜನಾಥ ಸಿಂಗ್ ನೇತೃತ್ವದ ಸರ್ವಪಕ್ಷ ನಿಯೋಗವು ಎರಡು ದಿನಗಳ ಭೇಟಿಗಾಗಿ ರವಿವಾರ ಇಲ್ಲಿಗೆ ಆಗಮಿಸಿದ್ದು, ಅದು ವಿವಿಧ ವರ್ಗಗಳ ಜನರೊಂದಿಗೆ ಸಂವಾದ ನಡೆಸಲಿದೆ.
ಕಾಶ್ಮೀರ ಕಣಿವೆಯಲ್ಲಿ ಶಾಂತಿ ಮತ್ತು ಸಹಜ ಸ್ಥಿತಿಯನ್ನು ಬಯಸುವ ವ್ಯಕ್ತಿಗಳು ಮತ್ತು ಗುಂಪುಗಳೊಂದಿಗೆ ಮಾತನಾಡಲು ನಾವು ಉದ್ದೇಶಿಸಿದ್ದೇವೆ ಎಂದು 30 ಸದಸ್ಯರ ನಿಯೋಗವು ದಿಲ್ಲಿಯಿಂದ ಹೊರಡುವ ಮುನ್ನ ಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಕಣಿವೆಯಲ್ಲಿ ಶಾಂತಿ ಮರುಸ್ಥಾಪನೆಗೆ ಪರಿಹಾರ ಮಾರ್ಗವೊಂದನ್ನು ಕಂಡುಕೊಳ್ಳುವ ಆಶಯವನ್ನು ತಾವು ಹೊಂದಿರುವುದಾಗಿ ನಾಯಕರು ಹೇಳಿದರು.
ಪ್ರತಿಯೊಬ್ಬರ ಅಹವಾಲನ್ನೂ ಆಲಿಸಲು ನಿಯೋಗವು ಸಿದ್ಧವಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಝಾದ್ ಅವರು ತಿಳಿಸಿದರು.
ನಿಯೋಗದ ಭೇಟಿಯಿಂದ ರಾಜ್ಯಕ್ಕೆ ಮತ್ತು ದೇಶಕ್ಕೆ ಲಾಭವಾಗಲಿದೆ ಎಂದ ಅವರು, ಪ್ರತಿಯೊಬ್ಬರೂ ರಾಜ್ಯದಲ್ಲಿ ಶಾಂತಿಯನ್ನು ಬಯಸುತ್ತಿದ್ದಾರೆ ಎಂದರು.
ನಿಯೋಗವು ಎರಡು ತಿಂಗಳ ಹಿಂದೆಯೇ ಭೇಟಿ ನೀಡಬೇಕಾಗಿತ್ತು. ಆದರೂ ನಾವು ಬದಲಾವಣೆಯೊಂದನ್ನು ತರುತ್ತೇವೆ ಎಂದು ಈಗಲೂ ಆಶಿಸೋಣ ಎಂದು ನಿಯೋಗದ ಇನ್ನೋರ್ವ ಸದಸ್ಯ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಹೇಳಿದರು.
ಸರ್ವಪಕ್ಷ ನಿಯೋಗದೊಂದಿಗೆ ಮಾತುಕತೆ ನಿರುಪಯುಕ್ತ: ಪ್ರತ್ಯೇಕತಾವಾದಿಗಳು
ಶ್ರೀನಗರ,ಸೆ.4: ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿರುವ ಸರ್ವಪಕ್ಷ ನಿಯೋಗದೊಂದಿಗೆ ಮಾತುಕತೆಯು ಮುಖ್ಯ ವಿವಾದವನ್ನು ಬಗೆಹರಿಸಲು ಪಾರದರ್ಶಕ,ಅಜೆಂಡಾ ಆಧಾರಿತ ಮಾತುಕತೆಗೆ ಪರ್ಯಾಯವಾಗದು ಎಂದು ಪ್ರತ್ಯೇಕತಾವಾದಿ ನಾಯಕರು ರವಿವಾರ ಇಲ್ಲಿ ಹೇಳಿದ್ದಾರೆ. ಸರ್ವಪಕ್ಷ ನಿಯೋಗವನ್ನು ಭೇಟಿಯಾಗುವಂತೆ ರಾಜ್ಯದ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ಶನಿವಾರ ಈ ನಾಯಕರನ್ನು ಆಹ್ವಾನಿಸಿದ್ದರು.
ಸ್ಪಷ್ಟ ಕಾರ್ಯಸೂಚಿಯ ಕುರಿತು ಯಾವುದೇ ಮಾತುಕತೆಯ ಬಗ್ಗೆ ತನ್ನ ಅಧಿಕಾರವೇನು ಎನ್ನುವುದನ್ನು ಹೇದ ನಿಯೋಗದೊಂದಿಗೆ ಮಾತುಕತೆಯಿಂದ ಸಾಧಿಸುವುದೇನೂ ಇಲ್ಲ ಎಂದು ಪ್ರತ್ಯೇಕತಾವಾದಿ ನಾಯಕರಾದ ಸೈಯದ್ ಅಲಿ ಗೀಲಾನಿ,ಮಿರ್ವೈಝ್ ಉಮರ್ ಫಾರೂಕ್ ಮತ್ತು ಮೊಹಮ್ಮದ್ ಯಾಸ್ಮಿನ್ ಮಲಿಕ್ ಅವರು ಇಲ್ಲಿ ಹೊರಡಿಸಲಾದ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಂಸದೀಯ ನಿಯೋಗದ ಮೂಲಕ ಬಿಕ್ಕಟ್ಟನ್ನು ಬಗೆಹರಿಸುವ ಎರಡನೇ ದರ್ಜೆಯ ಈ ಪದ್ಧತಿಗಳು ಮುಖ್ಯ ವಿವಾದವನ್ನು ಬಗೆಹರಿಸಲು ಅಜೆಂಡಾ ಆಧಾರಿತ ಪಾರದರ್ಶಕವಾದ,ಪ್ರಾಮಾಣಿಕ ಮಾತುಕತೆಗಳ ಸ್ಥಾನವನ್ನು ಪಡೆಯಲು ಸಾಧ್ಯವಿಲ್ಲ. ಇದು ಮೊದಲಿನಿಂದಲೂ ನಾವು ತಳೆದಿರುವ ನಿಲುವು ಆಗಿದೆ ಮತ್ತು ಇದನ್ನು ನಾವು ವಿವಿಧ ಅಂತರರಾಷ್ಟ್ರೀಯ ವೇದಿಕೆಗಳಿಗೆ ತಿಳಿಸಿದ್ದೇವೆ ಎಂದು ಅವರು ಹೇಳಿದ್ದಾರೆ.







