ಹಿಂಸಾಚಾರ ಕೃತ್ಯಗಳ ಮೂಲಕ ಸಾರ್ವಜನಿಕ ಶಾಂತಿಭಂಗ: ಮೂವರ ಗಡಿಪಾರು ಆದೇಶಕ್ಕೆ ಎಎಸ್ಪಿಯಿಂದ ಎಸಿಗೆ ವರದಿ
ಪುತ್ತೂರು,ಸೆ.4 : ಹಿಂಸಾಚಾರ ಕೃತ್ಯಗಳ ಮೂಲಕ ಭಯವನ್ನುಂಟು ಮಾಡಿ ಸೌಹಾರ್ದತೆಗೆ ಧಕ್ಕೆ ತರುವುದರೊಂದಿಗೆ ನೈತಿಕ ಗೂಂಡಾಗಿರಿಯಂತಹ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪೊಲೀಸ್ ಇಲಾಖೆಯ ದಾಖಲೆಗಳಿಂದ ರುಜುವಾತು ಆಗಿರುವ ಹಿನ್ನಲೆಯಲ್ಲಿ ಮೂವರನ್ನು ಪುತ್ತೂರು ಉಪವಿಭಾಗ ವ್ಯಾಪ್ತಿಯಿಂದ ಗಡಿಪಾರು ಮಾಡುವ ಆದೇಶ ಹೊರಡಿಸುವಂತೆ ಪುತ್ತೂರಿನ ಎಎಸ್ಪಿ ಅವರು ಪುತ್ತೂರು ಉಪವಿಭಾಗದ ದಂಡಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿಗಳಿಗೆ ವರದಿ ಸಲ್ಲಿಸಿರುವುದಾಗಿ ತಿಳಿದು ಬಂದಿದೆ.
ಪುತ್ತೂರು ತಾಲ್ಲೂಕಿನ ಆರ್ಯಾಪು ಗ್ರಾಮದ ಕುಂಜೂರುಪಂಜ ನಿವಾಸಿ ರಮೇಶ್ ಪೂಜಾರಿ ಅವರ ಪುತ್ರ ಜಯಂತ್, ಕೆಮ್ಮಿಂಜೆ ಗ್ರಾಮದ ಕೂರ್ನಡ್ಕ ನಿವಾಸಿ ಮಿಲನ್ ಉಸ್ಮಾನ್ ಅವರ ಪುತ್ರ ತೌಸಿಫ್, ಈ ಹಿಂದೆ ಪುತ್ತೂರಿನಲ್ಲಿ ವ್ಯಾಪಾರ ಅಂಗಡಿ ಹೊಂದಿದ್ದ, ಬಂಟ್ವಾಳ ತಾಲ್ಲೂಕಿನ ಗೋಳ್ತಮಜಲು ನರಹರಿ ಪರ್ವತ ಬಳಿಯ ನಿವಾಸಿ ಸಂಜೀವ ಪೂಜಾರಿ ಅವರ ಪುತ್ರ ಕಿಶೋರ್ ಎಂಬವರ ಸಾರ್ವಜನಿಕ ಶಾಂತಿಭಂಗ ಹಾಗೂ ಸಾರ್ವಜನಿಕ ನೆಮ್ಮದಿಗೆ ಭಂಗವನ್ನುಂಟು ಮಾಡುವ ಚಟುವಟಿಕೆಗಳನ್ನು ನಿಯಂತ್ರಿಸುವುದು ಅತೀ ಅಗತ್ಯವಾಗಿರುವ ಹಿನ್ನಲೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 53ರಂತೆ ಪುತ್ತೂರು ಉಪವಿಭಾಗದಿಂದ ಗಡಿಪಾರು ಮಾಡುವ ಆದೇಶ ಹೊರಡಿಸುವಂತೆ ಎಎಸ್ಪಿ ಅವರು ಪುತ್ತೂರು ಉಪವಿಭಾಗದ ದಂಡಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು.
ಈ ಮೂವರ ಗಡಿಪಾರು ಆದೇಶ ವಿಚಾರಕ್ಕೆ ಸಂಬಂಧಿಸಿ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.





