ಕಯಾನಿಯ ಪುತ್ರನ ಬಂಧಮುಕ್ತಿಗಾಗಿ ಝವಾಹರಿ ಪುತ್ರಿಯರ ಬಿಡುಗಡೆ?

ವಾಶಿಂಗ್ಟನ್,ಸೆ.4: ಪಾಕಿಸ್ತಾನದ ಮಾಜಿ ಸೇನಾ ವರಿಷ್ಠ ಅಶ್ಫಾಕ್ ಕಯಾನಿಯ ಪುತ್ರನನ್ನು ಉಗ್ರರ ಒತ್ತೆಸೆರೆಯಿಂದ ಬಿಡುಗಡೆಗೊಳಿಸಲು, ಅಲ್‌ಖಾಯಿದಾ ನಾಯಕ ಐಮಾನ್ ಅಲ್ ಝವಾಹರಿಯ ಇಬ್ಬರು ಪುತ್ರಿಯರನ್ನು ಹಾಗೂ ಇನ್ನೋರ್ವ ಮಹಿಳೆಯನ್ನು ಪಾಕಿಸ್ತಾನವು ಬಿಡುಗಡೆಗೊಳಿಸಿರುವ ಘಟನೆಯು ಇದೀಗ ಬೆಳಕಿಗೆ ಬಂದಿದೆ.
ಈ ಘಟನೆಯು ಪಾಕಿಸ್ತಾನದಲ್ಲಿ ಅಲ್‌ಖಾಯಿದಾ ಗುಂಪಿನ ಕಬಂಧ ಬಾಹುಗಳು ದೀರ್ಘವಾಗಿ ಚಾಚಿಕೊಂಡಿರುವುದಕ್ಕೆ ನಿದರ್ಶನವೆಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ಕಯಾನಿಯ ಪುತ್ರನ ಬಿಡುಗಡೆಗೆ ಪ್ರತಿಯಾಗಿ ಝವಾಹರಿಯ ಪುತ್ರಿಯರ ಹಸ್ತಾಂತರ ಪ್ರಕ್ರಿಯೆಯು ಕೆಲವು ವಾರಗಳ ಹಿಂದೆ ನಡೆದಿರುವುದಾಗಿ ಪ್ರಜಾಪ್ರಭುತ್ವಗಳ ರಕ್ಷಣಾ ಪ್ರತಿಷ್ಠಾನ ಪ್ರಕಟಿಸುತ್ತಿರುವ ಲಾಂಗ್ ವಾರ್ ಜರ್ನಲ್ ಪತ್ರಿಕೆಯು ತಿಳಿಸಿದೆ.
ಅಲ್‌ಖಾಯ್ದದ ಮುಖವಾಣಿಯೆಂದು ಹೇಳಲಾಗುತ್ತಿರುವ ಅಲ್‌ಮಸ್ರಾ ಪತ್ರಿಕೆಯ 20ನೇ ಆವೃತ್ತಿಯಲ್ಲಿ ಪ್ರಕಟವಾದ ವರದಿಯನ್ನು ಆಧರಿಸಿ, ‘ಲಾಂಗ್ ವಾರ್ ಜರ್ನಲ್’ ಪತ್ರಿಕೆಯಲ್ಲಿ ಈ ಸುದ್ದಿ ಪ್ರಕಟವಾಗಿದೆ. ಆದಾಗ್ಯೂ ಈವರೆಗೆ ಕಯಾನಿಯ ಪುತ್ರನ ಅಪಹರಣವು ವರದಿಯಾಗದಿದ್ದ ಕಾರಣ ಈ ಸುದ್ದಿಯನ್ನು ಇನ್ನೂ ದೃಢಪಡಿಸಲಾಗಿಲ್ಲ.
ನಿವೃತ್ತರಾಗಿದ್ದರೂ ಕಯಾನಿ ಪಾಕ್ ಸೇನೆಯ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲೊಬ್ಬರೆನಿಸಿದ್ದಾರೆ. ಪಾಕ್ ಸೇನೆ ಹಾಗೂ ಅದರ ಗುಪ್ತಚರ ಸಂಸ್ಥೆಗಳು, ದೀರ್ಘ ಸಮಯದಿಂದ ಅಲ್‌ಖಾಯದವನ್ನು ಬೆಂಬಲಿಸುತ್ತಲೇ ಬಂದಿದ್ದವೆಂದು ‘ಲಾಂಗ್ ವಾರ್ ಜರ್ನಲ್’ ಪತ್ರಿಕೆಯ ವರದಿ ಆಪಾದಿಸಿದೆ.
ಪಾಕಿಸ್ತಾನವು ತನ್ನ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಯ ಅಂಗವಾಗಿ ಪಾಕಿಸ್ತಾನದಲ್ಲಿ ನೆಲೆಸಿರುವ ಝವಾಹರಿಯ ಪುತ್ರಿಯರು ಹಾಗೂ ಇನ್ನೋರ್ವ ಉಗ್ರಗಾಮಿ ನಾಯಕ ಶೇಖ್ ಮುರ್ಜಾನ್ ಸಲೀಂ ಅಲ್ ಝವಾಹರಿಯ ಪುತ್ರಿಯನ್ನು ಪಾಕ್ ಸೇನೆಯು ಬಂಧಿಸಿತ್ತೆನ್ನಲಾಗಿದೆ. ಆರಂಭದಲ್ಲಿ ಪಾಕ್ ಸೇನೆಯು ಕೈದಿಗಳ ವಿನಿಮಯಕ್ಕೆ ವಿರೋಧ ವ್ಯಕ್ತಪಡಿಸಿತ್ತಾದರೂ, ಸುದೀರ್ಘ ಮಾತುಕತೆಯ ಬಳಿಕ ಸಮ್ಮತಿಸಿತೆಂದು ವರದಿ ತಿಳಿಸಿದೆ. ಆದರೆ ಕಯಾನಿಯ ಪುತ್ರನ ಹೆಸರನ್ನು ಈತನಕ ಬಹಿರಂಗಪಡಿಸಲಾಗಿಲ್ಲ.
ಪಾಕ್‌ಸೇನೆಯಿಂದ ಬಂಧಮುಕ್ತಿಗೊಂಡ ಬಳಿಕ ಝವಾಹರಿಯ ಪುತ್ರಿಯರು ಹಾಗೂ ಇನ್ನೋರ್ವ ಮಹಿಳೆ ಈಜಿಪ್ಟ್‌ಗೆ ಹಿಂತಿರುಗಿದ್ದಾರೆನ್ನಲಾಗಿದೆ.







