ಸಮಾನತೆ, ಸಹಬಾಳ್ವೆ, ಅಂಬೇಡ್ಕರ್‌ರ ಮೂಲ ಧ್ಯೇಯ: ರಾಮಕೃಷ್ಣ ಗುಂದಿ
ವಿಚಾರ ಸಂಕಿರಣ ಹಾಗೂ ಪ್ರಬಂಧ ಸ್ಪರ್ಧೆ

ಅಂಕೋಲಾ, ಸೆ.4: ಅಸಮಾನತೆ ಮತ್ತು ಶೋಷಣೆಯ ಪ್ರತೀಕವಾಗಿದ್ದ ಹಾಗೂ ಮಹಿಳೆಯರನ್ನು ತುಚ್ಛವಾಗಿ ಕಂಡ ಮನಸ್ಮತಿಯನ್ನು ಡಾ. ಬಿ.ಆರ್.ಅಂಬೇಡ್ಕರ್‌ಅವರು ಓರ್ವ ಮಹಿಳೆಯಿಂದ ಸುಟ್ಟು ಹಾಕಿಸಿದ್ದರು ಎಂದು ಖ್ಯಾತ ಕತೆಗಾರರು ವಿಶ್ರಾಂತ ಪ್ರಾಚಾರ್ಯ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಚಿತ್ರಯಾನ ರಾಜ್ಯ ಸಂಘಟನಾ ಸಮಿತಿಯ ಅಧ್ಯಕ್ಷ ಡಾ. ರಾಮಕೃಷ್ಣ ಗುಂದಿ ನುಡಿದರು.
ಅವರು ಇಂದು ನಗರದ ಕೆ.ಎಲ್.ಇ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಂಗಾತಿ ರಂಗಭೂಮಿ ರಿ. ಅಂಕೋಲಾ ರಾಷ್ಟ್ರೀಯ ಕಾನೂನು ಶಾಲೆ ಬೆಂಗಳೂರು, ಡಾ. ಬಿ.ಆರ್.ಅಂಬೇಡ್ಕರ್ ಚಿತ್ರಯಾನ ರಾಜ್ಯ ಸಂಘಟನಾ ಸಮಿತಿ ಮತ್ತು ಕೆ.ಎಲ್.ಇ.ಶಿಕ್ಷಣ ಮಹಾವಿದ್ಯಾಲಯ ಇವರ ಆಶ್ರಯದಲ್ಲಿ ಸಂಘಟಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೆ ವರ್ಷ ಆಚರಣೆ ಪ್ರಯುಕ್ತ ವಿಚಾರ ಸಂಕಿರಣ ಹಾಗೂ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಅಂಬೇಡ್ಕರ್ ಕುರಿತು ಹೆಚ್ಚು ಹೆಚ್ಚು ಓದುವುದು, ಅವರ ಬಗ್ಗೆ ಅಧ್ಯಯನ ನಡೆಸುವುದು ಇಂದಿನ ಯುವ ಜನರು ಮಾಡಬೇಕು. ಸ್ವಾತಂತ್ರ ಸಹ ಬಾಳ್ವೆ, ಸಮಾನತೆ ಅಂಬೇಡ್ಕರ್ ಅವರ ಮೂಲ ಧ್ಯೇಯವಾಗಿತ್ತು. ನಮ್ಮ ಚಿತ್ರ ಯಾನ ತಂಡ ವ್ಯಾಪಕವಾಗಿ ರಾಜ್ಯಾದ್ಯಂತ ಅಂಬೇಡ್ಕರ್‌ವಿಚಾರ ಧಾರೆಯ 2 ತಾಸಿನ ಚಲನ ಚಿತ್ರದ ಮೂಲಕ ವಿದ್ಯಾರ್ಥಿ ಯುವಜನರಲ್ಲಿ ಸಂಚಲನ ಮೂಡಿಸುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಬಿ.ಎಡ್. ಕಾಲೇಜಿನ ಪ್ರಾಚಾರ್ಯ ವಿನಾಯಕ ಹೆಗಡೆ ಮಾತನಾಡಿ, ಜಾತಿ-ಧರ್ಮ ಇವುಗಳ ನಡುವಿನ ತಾರತಮ್ಯ ಕೊನೆಯಾಗಬೇಕು ಎಂದರು. ವಿಶ್ರಾಂತ ಪ್ರಾಂಶುಪಾಲ ಹಾಗೂ ಕವಿ ಪ್ರೊ. ಮೋಹನ ಎಸ್. ಹಬ್ಬು ಮಾತನಾಡಿ, ಜಾತೀಯತೆ ಅವಿದ್ಯಾವಂತರಿಗಿಂತಲೂ ಶಿಕ್ಷಣ ಪಡೆದವರಲ್ಲಿಯೇ ಹೆಚ್ಚಾಗಿ ಕಂಡು ಬರುತ್ತಿದೆ. ಇದು ಉತ್ತಮ ಬೆಳವಣಿೆಗೆ ಅಲ್ಲ್ಲ. ಗಾಂಧೀಜಿ ಮತ್ತು ಅಂಬೇಡ್ಕರ್ ನಡುವೆ ತಾತ್ವಿಕ ಭಿನ್ನಾಭಿಪ್ರಾಯಗಳು ಇದ್ದವು. ಅಂಬೇಡ್ಕರ್ ಸಮಾನತೆಗಾಗಿ ತಮ್ಮ ಇಡೀ ಜೀವನವನ್ನೇ ಹೋರಾಟಕ್ಕಾಗಿ ಮುಡಿಪಾಗಿಟ್ಟರು ಎಂದರು. ಕಾರವಾರ ಕಸಾಪ ಅಧ್ಯಕ್ಷ ಹಾಗೂ ಪತ್ರಕರ್ತ ನಾಗರಾಜ ಹರಪನಳ್ಳಿ ಮಾತನಾಡಿ , ಅಂಬೇಡ್ಕರ ಪ್ರಜಾಪ್ರಭುತ್ವದ ಸಂಕೇತ. ಅವರು ದಲಿತರಿಗೆ ಮಾತ್ರ ಮೀಸಲಾತಿ ನೀಡಲಿಲ್ಲ್ಲ. ಎಲ್ಲ ಹಿಂದುಳಿದ ವರ್ಗದವರಿಗೆ ನೀಡಿದರು. ಸಂವಿಧಾನವೇ ನಮಗೆ ಭಗವದ್ಗೀತೆ ಆಗಬೇಕು ಎಂದರು. ಉದ್ಯಮಿ ಸಾಮಾಜಿಕ ಕಾರ್ಯಕರ್ತ ಸುರೇಶ್.ಆರ್ ನಾಯಕ ಮಾತನಾಡಿ, ಅಂಬೇಡ್ಕರ್ ಬಗ್ಗೆ ಸಂಪೂರ್ಣ ಜ್ಞ್ಞಾನ ಶಿಕ್ಷಕರಿಗೆ ಇದ್ದರೆ ಅದು ಸಮಾಜದ ಬೆಳವಣಿಗೆಗೆ ಸಹಾಯಕಾರಿಯಾಗುತ್ತದೆ. ಪ್ರಬಂಧ ಸ್ಪರ್ಧೆ ನಿರ್ಣಾಯಕ ನಾಗಪತಿ ಹೆಗಡೆ ತಮ್ಮ ಅನಿಸಿಕೆ ವ್ಯಕ್ತಪಡಿಸಿ ಬರಹಗಾರರು ತಮ್ಮ ಸ್ವಂತಿಕೆ ಬೆಳೆಸಿಕೊಂಡು ಬರೆಯಬೇಕೆಂದು ಕಿವಿ ಮಾತು ಹೇಳಿದರು. ಪ್ರಬಂಧ ಸ್ಪರ್ಧೆಯಲ್ಲಿ ಕೆ.ಎಲ್.ಈ.ಬಿ.ಈಡಿ ಕಾಲೇಜಿನಿಂದ 64 ವಿದ್ಯಾರ್ಥಿಗಳು ಭಾಗವಹಿಸಿದರು. ಈ ಸ್ಪರ್ಧೆಯಲ್ಲಿ ಅಂಬೇಡ್ಕರ್ ಅವರ 5 ಮುಖ್ಯ ವಿಚಾರಧಾರೆಯ ಕುರಿತಾಗಿ ವಿಷಯಗಳನ್ನು ನೀಡಲಾಗಿತ್ತು. ಡಾ. ರಾಮಕೃಷ್ಣ ಗುಂದಿ ಅವರು ಬಹುಮಾನದ ಪ್ರಾಯೋಜಕತ್ವ ವಹಿಸಿಕೊಂಡಿದ್ದರು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿನಿಯರಾದ ಧನ್ಯಾ ಕಲಭಾಗ, ಅಶ್ವಿನಿ ನಾಯ್ಕ ಅಂಬೇಡ್ಕರ್ ಕುರಿತು ಮಾತನಾಡಿದರು.
ಚಿತ್ರಯಾನ ತಂಡದ ಪ್ರಧಾನ ಸಂಚಾಲಕ ಕೆ.ರಮೇಶ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ತಿಮ್ಮಣ್ಣ ಭಟ್ ಅತಿಥಿಗಳಿಗೆ ಅಂಬೇಡ್ಕರ್ ಗ್ರಂಥಗಳನ್ನು ನೀಡಿದರು. ವಿದ್ಯಾರ್ಥಿನಿ ಸುಜಾತಾ ಕೆ. ನಿರ್ವಹಿಸಿದರು. ಪುಷ್ಪಾ ಎ. ನಾಯ್ಕ ವಂದಿಸಿದರು. ವಿದ್ಯಾರ್ಥಿನಿಯರು ಸ್ವಾಗತ ಗೀತೆ ಹಾಡಿದರು.





